ಐಸಿಸ್​ ಜೊತೆ ಸಂಪರ್ಕ: ಎಟಿಎಸ್​ ನಿಂದ ಭಟ್ಕಳ್​ ಮಹಿಳೆಯ ವಿಚಾರಣೆ

ಹೊಸದಿಗಂತ, ವರದಿ,ಕಾರವಾರ:

ಭಯೋತ್ಪಾದಕ ಸಂಘಟನೆಯೊಂದಕ್ಕೆ ಹಣ ವರ್ಗಾವಣೆ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು ಆತನಿಗೆ ಲಕ್ಷಾಂತರ ರೂಪಾಯಿ ಹಣ ನೀಡಿರುವ ಭಟ್ಕಳದ ಮಹಿಳೆಯೋರ್ವರನ್ನು ಮುಂಬೈ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.

ಉಗ್ರ ಐಸಿಸ್ ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಎಂಬಾತನನ್ನು ಎರಡು ದಿನಗಳ ಹಿಂದೆ ಮುಂಬೈನಲ್ಲಿ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದು ಆತನಿಗೆ ಭಟ್ಕಳದ ಮಹಿಳೆಯ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವುದು ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಆಗಮಿಸಿದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದಿಂದ ಭಟ್ಕಳದ ಆಜಾದ ನಗರದ ಮನೆಗೆ ತೆರಳಿ ಮಹಿಳೆಯ ವಿಚಾರಣೆ ನಡೆಸಿದ್ದಾರೆ.

ಭಟ್ಕಳ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿರುವ ವ್ಯಕ್ತಿಯ ಮಗಳಾಗಿರುವ ಮಹಿಳೆ ಗಂಡನಿಗೆ ವಿಚ್ಛೇದನ ನೀಡಿ ತಂದೆಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗುತ್ತಿದ್ದು ಈಕೆ ಸಾಮಾಜಿಕ ಜಾಲ ತಾಣಗಳ ಮೂಲಕ ಪರಿಚಯ ಆಗಿದ್ದ ಬಂಧಿತ ಅಬ್ದುಲ್ ಅಜೀಜ್ ಶೇಖ್ ಜೊತೆ ಅತಿಯಾದ ಆತ್ಮೀಯತೆ ಹೊಂದಿರುವ ಕುರಿತು ಮತ್ತು ಇವರಿಬ್ಬರ ನಡುವೆ ಕೆಲವೊಂದು ಲೈವ್ ಚಾಟ್ ಗಳು ಸಹ ನಡೆದಿರುವ ಕುರಿತು ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ ಎನ್ನಲಾಗುತ್ತಿದೆ.

ಬಂಧಿತ ವ್ಯಕ್ತಿ ಇದೇ ತಿಂಗಳು ಭಟ್ಕಳಕ್ಕೆ ಸಹ ಆಗಮಿಸಿ ವಸತಿಗೃಹವೊಂದರಲ್ಲಿ ಮಹಿಳೆಗೆ ಭೇಟಿಯಾಗಿರುವ ಕುರಿತು ಮಾಹಿತಿ ದೊರಕಿದ್ದು ಮಹಿಳೆಯ ಬ್ಯಾಂಕ್ ಖಾತೆಯಿಂದ ಸುಮಾರು 5 ಲಕ್ಷ ಹಣ ಈತನಿಗೆ ಸಂದಾಯವಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಹುಸೇನ್ ಅಬ್ದುಲ್ ಅಜೀಜ್ ನಿಷೇದಿತ ಭಯೋತ್ಪಾದಕ ಸಂಘಟನೆ ಐಸಿಸ್ ಬೆಂಬಲಿಗನಾಗಿದ್ದು ಭಯೋತ್ಪಾದಕ ಸಂಘಟನೆಗೆ ಹಣದ ವರ್ಗಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.

ಇಂಜಿನಿಯರ್ ಆಗಿರುವ ಹುಸೇನ್ ಅಬ್ದುಲ್ ಅಜೀಜ್ ನಿಕಟ ಸಂಪರ್ಕದಲ್ಲಿದ್ದವರನ್ನು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಭಟ್ಕಳಕ್ಕೆ ಆಗಮಿಸಿ ಮಹಿಳೆಯ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!