Wednesday, July 6, 2022

Latest Posts

ಅಂಕುಶವಾಯ್ತು ನಾಸಾಪುಟದ ರೇಖೆ

ಇತಿಹಾಸ ಓದಿದವರಿಗೆಲ್ಲ ಕ್ಲಿಯೋಪಾತ್ರ ಎಂಬ ಹೆಸರು ಪರಿಚಿತವೇ. ಈಜಿಪ್ಟ್ ಹಾಗೂ ರೋಮ್ ಸಾಮ್ರಾಜ್ಯಗಳನ್ನು ಮತ್ತು ಅಲ್ಲಿನ ಸರ್ವಾಧಿಕಾರಿಗಳನ್ನು ದಶಕಗಳ ಕಾಲ ಬೆರಳ ತುದಿಯಲ್ಲಿ ಕುಣಿಸಿದವಳು ಅವಳು. ಅದ್ಭುತ ಲಾವಣ್ಯವತಿಯೆಂದೂ ಅಷ್ಟೇ ಬುದ್ಧಿಶಕ್ತಿಯಿದ್ದವಳೆಂದೂ ಅವಳನ್ನು ಚರಿತ್ರಕಾರರು ಚಿತ್ರಿಸಿದ್ದಾರೆ. ಸೃಷ್ಟಿಯ ಒಂದು ವಿಡಂಬನೆ ಎಂದರೆ ದೈಹಿಕ ಸೌಂದರ್ಯ ಇದ್ದವರೆಲ್ಲ ಬುದ್ಧಿವಂತರಾಗಿರುವುದಿಲ್ಲ. ಬುದ್ಧಿವಂತರು ಸುಂದರವಾಗಿರುವುದಿಲ್ಲ. ಆದರೆ ಎಲ್ಲೋ ವಿರಳವಾಗಿ ಇವೆರಡೂ ಸಮಪಾಕವಾಗಿ ಕೆಲವರು ಕಾಣಿಸುವುದುಂಟು. ಅಂತಹ ಒಂದು  ವಿರಳವಾದ ವ್ಯಕ್ತಿತ್ವ ಇದ್ದವಳು ಈ ಕ್ಲಿಯೋಪಾತ್ರ. ಅದರಲ್ಲೂ ಅವಳ ಚೆಲುವು ಹಾಗೂ ಮಾಟವಾದ ಮೂಗಿನ ಬಗ್ಗೆ ವಿಶೇಷ ಉಲ್ಲೇಖಗಳಿವೆ.

ಈಜಿಪ್ಟಿನ ರಾಜಮನೆತನದಲ್ಲಿ ಕ್ರಿಸ್ತಪೂರ್ವ ಯುಗದಲ್ಲಿ ಹುಟ್ಟಿದ ಕ್ಲಿಯೋಪಾತ್ರ ಅಲ್ಲಿನ ಪದ್ಧತಿಯಂತೆ ತನ್ನ ಸೋದರನನ್ನು ಮದುವೆಯಾಗಿ ಸಿಂಹಾಸನವೇರಿದಳು. ಪಾಲಿಗೆ ಬಂದುದನ್ನು ಉಂಡು ತೃಪ್ತಳಾಗುವ ಮನೋಧರ್ಮ ಅವಳದಲ್ಲ. ಮಹತ್ತ್ವಾಕಾಂಕ್ಷೆಯ ಕಿಚ್ಚು ಧಗಧಗಿಸುತ್ತಿತ್ತು ಅವಳಲ್ಲಿ. ಅದನ್ನು ಈಡೇರಿಸಿಕೊಳ್ಳುವ ಚಾತುರ್ಯವೂ ಇತ್ತು. ಎಳವೆಯಲ್ಲಿ ತಂದೆಯೊಂದಿಗೆ ದೇಶಭ್ರಷ್ಟಳಾದರೂ ಬಳಿಕ ಸಿಂಹಾಸನ ಅವಳ ಸ್ವಾಧೀನಕ್ಕೆ ಬಂತು. ರೋಮ್‌ನ ಸಹಾಯ ಅದಕ್ಕಾಗಿ ಒದಗಿತು.

ಆ ಕಾಲದಲ್ಲಿ ರೋಮಿನ ದಂಡನಾಯಕನಾಗಿದ್ದ ಜೂಲಿಯಸ್ ಸೀಝರನ ಮೇಲೆ ತನ್ನ ಚೆಲುವಿನ ಮೋಡಿ ಬೀರಿ ಅವನನ್ನು ಅನಧಿಕೃತವಾಗಿ ಮದುವೆಯಾದಳು. ಮಗುವೂ ಜನಿಸಿತು. ಅವನ ಜತೆ ಈಜಿಪ್ಟ್ ಹಾಗೂ ರೋಮ್ ಸಾಮ್ರಾಜ್ಯವನ್ನು ಆಳುವ ಅಪೇಕ್ಷೆ ಅವಳದು. ಆದರೆ ರೋಮಿನಲ್ಲಿ ಸೀಝರನ ಕೊಲೆಯ ಬಳಿಕ ಈಜಿಪ್ಟಿಗೆ ಮರಳಿದಳು.ಸಿಂಹಾಸನವೇರುವ ಅರ್ಹತೆಗಾಗಿ ಇನ್ನೊಬ್ಬ ಕಿರಿಯ ಸೋದರನನ್ನು ಮದುವೆಯಾದಳು. ಸೀಝರನ ಉತ್ತರಾಧಿಕಾರಿ ಮಾರ್ಕ್ ಅಂಟೊನಿ ಈಜಿಪ್ಟಿಗೆ ಬಂದಾಗ ಅವನನ್ನು ಬಲೆಗೆ ಹಾಕಿಕೊಂಡು ಮದುವೆಯಾದಳು.ಕೊನೆಯಲ್ಲಿ ದಂಗೆಯನ್ನು ಹತ್ತಿಕ್ಕಲಾರದೆ ಸೋತು ಅಂಟೊನಿ ಹಾಗೂ ಕ್ಲಿಯೋಪಾತ್ರ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡರು. ತನ್ನ ಸೌಂದರ್ಯ ಹಾಗೂ ಬುದ್ಧಿವಂತಿಕೆಯಿಂದ ಎರಡು ದಶಕಗಳ ಕಾಲ ರಾಜ್ಯವಾಳಿದರೂ ಅವಳ ಬದುಕು ದುರಂತವನ್ನು ಕಂಡಿತು. ಸೀಝರ್ ಹಾಗೂ ಅಂಟೊನಿ ಎಂಬ ಇಬ್ಬರು ಮಹಾ ದಂಡನಾಯಕರು ಕ್ಲಿಯೋಪಾತ್ರಳಿಗಾಗಿ ಹಂಬಲಿಸಿ ಏನೆಲ್ಲವನ್ನು ಕಳೆದುಕೊಂಡರು ಅನ್ನುವುದನ್ನು ಡಿವಿಜಿ ಅವರು ಕಗ್ಗದಲ್ಲಿ ಹೀಗೆ ಬಣ್ಣಿಸುತ್ತಾರೆ,

‘ನಾಸಿಕದ ಮಾಟದಿಂದಾ ಕ್ಲಿಯೋಪಾತ್ರಳಿಗೆ

ದಾಸರಾದರು ಶೂರ ಸೀಸರಾಂಟನಿಗಳ್

ದೇಶಚರಿತೆಗಮವರ ಜಸಕಮಂಕುಶಮಾಯ್ತು

ನಾಸಾಪುಟದ ರೇಖೆ ಮಂಕುತಿಮ್ಮ’

ಎಷ್ಟು ಪ್ರಚಂಡ ಯೋಧರಾದರೇನು? ಆಡಳಿತ ಪರಿಣತರಾದರೇನು? ಕ್ಲಿಯೋಪಾತ್ರಳ ಮೂಗಿನ ವಕ್ರತೆಗೆ ಅಡಿಯಾಳುಗಳಾಗಿ ದೇಶಕ್ಕೂ ತಮ್ಮ ಕೀರ್ತಿಗೂ ಭಂಗ ತಂದುಕೊಂಡರಲ್ಲ ಅನ್ನುತ್ತಾರೆ ಡಿವಿಜಿ.

ಮೊದಲ ಪತ್ನಿ ಇದ್ದಾಗಲೇ ಸೀಝರ್ ಕ್ಲಿಯೋಪಾತ್ರಳ ಮೋಹಕ್ಕೆ ಒಳಗಾದ. ಅವಳಿಗಾಗಿ ತನ್ನ ರಾಜಕೀಯ ಬದುಕನ್ನೇ ಬಲಿಗೊಟ್ಟ. ರೋಮ್ ಸಾಮ್ರಾಜ್ಯದ ಚಕ್ರವರ್ತಿಯಾಗಿ ದೇಶಕ್ಕೆ ಸಮೃದ್ಧಿಯನ್ನು ತಂದುಕೊಡಬಹುದಿತ್ತು. ಜನರೂ ಅವನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದರು. ಯಾವಾಗ ಕ್ಲಿಯೋಪಾತ್ರಳ ವಶವರ್ತಿಯಾದನೋ ಅವಳ ಮೂರ್ತಿಯನ್ನು ಕಟೆದು ನಿಲ್ಲಿಸ ಹೊರಟನೋ ಆಗ ರೋಮಿನಲ್ಲಿ ಸೀಝರನ ಕೀರ್ತಿಗೆ ಕಳಂಕ ಮೆತ್ತಿಕೊಂಡಿತು. ಬ್ರೂಟಸನಂತಹ ಸಮೀಪವರ್ತಿಗಳೇ ಅವನಿಗೆ ಚೂರಿ ಹಾಕಿದರು. ಅಂಟೊನಿ ಇದಕ್ಕಿಂತ ಭಿನ್ನನಲ್ಲ. ಕ್ಲಿಯೋಪಾತ್ರಳ ವಿಚಾರಣೆಗೆ ಬಂದವನು ಅವಳ ಸಂಪತ್ತಿಗೂ ಚೆಲುವಿಗೂ ಮರುಳಾದ. ಅವನ ಮೊದಲ ಪತ್ನಿ ಒಕ್ಟೆವಿಯಾಳನ್ನು ನಿರ್ಲಕ್ಷಿಸಿದ. ಒಕ್ಟೆವಿಯಾಳ ಅಣ್ಣನೇ ಭಾವನ ವಿರುದ್ಧ ತಿರುಗಿಬಿದ್ದ. ದಂಗೆಯಾಯಿತು. ಕೊನೆಗೆ ಬಹು ಪರಾಕ್ರಮಿಯಾದ ಈ ಗಂಡುಗಲಿ ತನ್ನನ್ನು ತಾನೇ ಕೊಂದುಕೊಂಡ.

ಇವರಿಬ್ಬರು ಅವಳ ಮೂಗಿನ ಮಾಟಕ್ಕೆ ಮರುಳಾಗದೇ ಇದ್ದಿದ್ದರೆ ಚರಿತ್ರೆಯಲ್ಲಿ ಚಿರಸ್ಥಾಯಿಯಾದ ಕೀರ್ತಿಗೆ ಪಾತ್ರರಾಗುತ್ತಿದ್ದರು. ರೋಮನ್ನರು ಅವರನ್ನು ತಲೆಯ ಮೇಲಿಟ್ಟು ಮೆರೆಸುತ್ತಿದ್ದರು. ಆದರೆ ಕ್ಲಿಯೋಪಾತ್ರಳನ್ನು ತಲೆಯ ಮೇಲಿಟ್ಟುಕೊಂಡಿದ್ದ ಇವರನ್ನು ಜನ ಮನ್ನಿಸಲಿಲ್ಲ. ಪರಿಣಾಮವಾಗಿ ಮಹಾಪತನವೇ ಸಂಭವಿಸಿತು. ಬೃಹತ್ ಸಾಮ್ರಾಜ್ಯವನ್ನು ನಿಯಂತ್ರಿಸಿ ಆಳುತ್ತಿದ್ದ ಈ ಸಾಹಸಿಗಳಿಗೆ ವಿವೇಕ ಇರಲಿಲ್ಲ ಎನ್ನೋಣವೆ? ಸೀಝರ್ ಬುದ್ಧಿಶಾಲಿ. ಅವನು ಲೇಖಕನೂ ಹೌದು. ಹಾಗಿದ್ದರೂ ತನ್ನ ಅಧಃಪತನದ ಸೂಚನೆಯನ್ನು ಗ್ರಹಿಸದೇ ಹೋದ. ಅಂಟೊನಿಗೋ ಕಣ್ಣ ಮುಂದೆ ಸೀಝರನು ಕ್ಲಿಯೋಪಾತ್ರಳಿಗೆ ಮರುಳಾಗಿ ಮುಗ್ಗರಿಸಿದ ದೃಷ್ಟಾಂತ ಜೀವಂತವಿತ್ತು. ಆದರೇನು? ಅವನು ಅದನ್ನು ಕಾಣಲೇ ಇಲ್ಲ. ಒಂದು ಮಾತಿದೆ ‘ಬಡಿಗಂಡನಿಲ್ಲ ಪಾಲನೆ ಕಂಡಂ’ ಅಂತ. ಅಂದರೆ ಹಾಲು ತುಂಬಿದ ಪಾತ್ರೆಯನ್ನು ನೋಡಿ ಅದನ್ನು ಕುಡಿಯುವುದಕ್ಕೆ ಮುಂದಾಗುವವನೊಬ್ಬ ಆ ಪಾತ್ರೆಯ ಪಕ್ಕದಲ್ಲೇ ಇರುವ ಬಡಿಗೆಯನ್ನು ಕಾಣಲಿಲ್ಲ ಅಂತ. ಸಂಪತ್ತಿನ ಮೋಹಕ್ಕೆ ಒಳಗಾದವ ಅದರ ಹಿಂದಿರುವ ಆಪತ್ತನ್ನು ಗುರುತಿಸದಂತೆ ಅಂಟೊನಿಯ ಕಥೆ.

ಇದು ಇತಿಹಾಸ. ಆದರೆ, ವರ್ತಮಾನದಲ್ಲಿ ಇಂತಹ ಉದಾಹರಣೆಗಳಿಲ್ಲವೆ? ಬೇಕಾದಷ್ಟಿವೆ. ಅಂತವರನ್ನು ನೋಡಿಯೇ ದೇಶಚರಿತೆಗೂ ನಾಯಕರ ಯಶಸ್ಸಿಗೂ ‘ನಾಸಾಪುಟದೊಂದು ರೇಖೆ’ ಅಂಕುಶವಾಗಿ ಪರಿಣಮಿಸಿತು ಅಂದದ್ದು. ಕರ್ನಾಟಕದಲ್ಲಿ ಒಬ್ಬ ಹಿರಿಯ ರಾಜಕಾರಣಿಯಿದ್ದರು. ಒಂದು ಕಾಲದಲ್ಲಿ ಅತ್ಯುತ್ತಮ ಆಳ್ವಿಕೆ ಕೊಟ್ಟವರು. ದುರ್ದೈವವಶಾತ್ ಅವರಿಗೂ ಇಂತಹ ಒಂದು ನಾಸಾಪುಟದ ರೇಖೆ ಬಾಧಿಸಿತು. ಅದರ ಪರಿಣಾಮವಾಗಿ ಇಳಿವಯಸ್ಸಿನಲ್ಲಿ ಅವರು ಅನುಭವಿಸಬೇಕಾಗಿ ಬಂದ ಹೀನಾಯ ಸ್ಥಿತಿಯನ್ನು ಪತ್ರಕರ್ತರೊಬ್ಬರು ವಿಷದವಾಗಿ ಬರೆದಿದ್ದಾರೆ. ಈಗಲೂ ರಾಜನೀತಿಯಲ್ಲಿ ಪರಿಣತರಾದವರು, ನಾಯಕ ಮಣಿಗಳೆನಿಸಿದವರು ಆಧುನಿಕ ಕ್ಲಿಯೋಪಾತ್ರರ ಬಲೆಯೊಳಗೆ ಸಿಲುಕಿಕೊಂಡಿರುವುದು ಕಾಣುತ್ತದೆ. ರಾಜನೀತಿಯಲ್ಲಿ ನಿಷ್ಣಾತರು, ನೀತಿಯಲ್ಲಿ ಅಲ್ಲ ಅಷ್ಟೇ. ಸಿನಿಮಾದಲ್ಲಿ ಅದರ್ಶ ನಾಯಕರೆಂದು ಬೆಳ್ಳಿಪರದೆಯ ಮೇಲೆ ರಾರಾಜಿಸುವ ಹೀರೋಗಳ ಸ್ಥಿತಿಯೂ ಭಿನ್ನವೇನಲ್ಲ. ಕಲಾವಿದರ ಬದುಕಿನಲ್ಲಿಯೂ ಕ್ಲಿಯೋಪಾತ್ರ ಬರುವುದಿದೆ. ಆ ಕ್ಷಣದ ಆಮಿಷ ಟಾಲೆಮಿಯನ್ನು (ಕ್ಲಿಯೋಪಾತ್ರಳ ಮೊದಲ ಪತಿ), ತಮ್ಮ ಮನೆಯೊಳಗಿನ ಕಲ್ಪುರಿನಾ ಅಥವಾ ಒಕ್ಟೆವಿಯಾರನ್ನು ಮರೆತು ಹೋಗುವಂತೆ ಮಾಡುತ್ತದೆ. ತಮ್ಮ ಮೋಹವನ್ನು ಬಿಡಲಾರದೆ ಅನಧಿಕೃತ ಮದುವೆಗಳು ಸಂಭವಿಸುತ್ತವೆ. ಸಂತಾನವೂ ಆದೀತು. ಆದರೆ ಈ ಸಂತೋಷಕ್ಕಾಗಿ ಬಲಿಕೊಡಬೇಕಾದ ಚಾರಿತ್ರ್ಯದ ಕುರಿತು ಆಲೋಚಿಸುವವರು ವಿರಳ. ಅಥವಾ ಯೋಚಿಸುವವರಾದರೆ ಇಂತಹ ಸಂಭಾವ್ಯತೆಯೇ ಇಲ್ಲ ತಾನೆ? ಇಂದ್ರಿಯಗಳು ಬಲವತ್ತರವಾಗಿವೆ. ಅವು ಎಂತಹ ಪ್ರಾಜ್ಞನನ್ನಾದರೂ ಆಕರ್ಷಿಸುತ್ತವೆ ಅನ್ನುವ ಹೇಳಿಕೆಯಿದೆ. ಆದುದರಿಂದಲೇ ನಿಯಂತ್ರಣಕ್ಕಾಗಿ ಸಂಹಿತೆ, ಶಾಸ್ತ್ರ, ಶಾಸನಗಳಿರುವುದು.

ಪ್ರತಿಭಾವಂತರಿಗೆ ಇದು ಸಹಜ ಎಂಬ ಒಂದು ವಾದವಿದೆ. ಒಂದು ವೇಳೆ ಅದನ್ನು ಒಪ್ಪುವುದಾದರೆ ನೀತಿ ಎಂಬುದು ಆಯ್ಕೆಯ ಹೇರಿಕೆಯಾಗುತ್ತದೆ. ಪ್ರತಿಭಾವಂತನ ವ್ಯಭಿಚಾರ, ಭ್ರಷ್ಟತೆಯನ್ನು ಕ್ಷಮಿಸಿ ಸಾಮಾನ್ಯರು ಮಾತ್ರ ನೀತಿವಂತರಾಗಿ ಬಾಳಬೇಕು ಎಂದು ಸಾರಬೇಕಾಗುತ್ತದೆ. ಹಾಗೆ ನೋಡಿದರೆ ಸಾಮಾನ್ಯ ರೋಮನ್ ಒಬ್ಬ ತಪ್ಪಿದ್ದರೆ ಅಥವಾ ಕ್ಲಿಯೋಪಾತ್ರಳ ವಶವರ್ತಿಯಾಗಿದ್ದರೆ ಪ್ರಬಲ ಪರಿಣಾಮವೇನೂ ಆಗುತ್ತಿರಲಿಲ್ಲ. ಒಂದು ಸಾಮ್ರಾಜ್ಯವನ್ನಾಳುವ ಸೀಝರ್, ಅಂಟೊನಿಯಂತಹ ಪ್ರಭಾವಶಾಲಿಗಳು ‘ಅವಳ ಮೂಗಿನ ನೇರಕ್ಕೆ’ ನಡೆದುದೇ ದೇಶದ ಚರಿತೆ ಕೆಡುವುದಕ್ಕೆ ಕಾರಣವಾದದ್ದು. ಒಂದು ಸಮೂಹವನ್ನು ಪ್ರಭಾವಿಸುವ ಸಾಮರ್ಥ್ಯವುಳ್ಳವರ ಜೀವನ ಭ್ರಷ್ಟವೆಂದು ಬಹಿರಂಗವಾದಾಗ ಅವರ ಜಸ (ಕೀರ್ತಿ) ಮಾತ್ರವಲ್ಲ ದೇಶಚರಿತೆಯೂ ಕಳಂಕಿತವಾಗುತ್ತದಷ್ಟೆ? ವ್ಯಕ್ತಿಯ ಚಾರಿತ್ರ್ಯವು ಸಮೂಹವನ್ನು ಪ್ರಭಾವಿಸುವ ಸಂದರ್ಭದಲ್ಲಿ ಹೆಚ್ಚು

ಜಾಗೃತಿ ಇರಬೇಕಾಗುತ್ತದೆ. ಇಲ್ಲವಾದರೆ ಮೇನಕೆಯ ಮೋಹದಿಂದ ತಪೋಭ್ರಷ್ಟನಾದ ವಿಶ್ವಾಮಿತ್ರನಂತೆ ಕೆಸರು ತೊಳೆಯುವುದೇ ಕೆಲಸವಾಗುತ್ತದೆ ಮತ್ತು ಅವರನ್ನು ನಂಬಿದವರು ತ್ರಿಶಂಕುವಿನಂತೆ ತಲೆಕೆಳಗಾಗಿ ನೇತಾಡ ಬೇಕಾಗುತ್ತದೆ.

-ರಾಧಾಕೃಷ್ಣ ಕಲ್ಚಾರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss