ಅಂಕೋಲಾ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಗೆ ಗಂಗಾವಳಿ ನದಿ ರೌದ್ರಾವತಾರ ತಾಳಿದ್ದು, ನದಿಪಾತ್ರದ ಹಲವು ಹಳ್ಳಿಗಳು ಜಲಾವೃತ್ತವಾಗಿವೆ. ಕಳೆದ ವರ್ಷ ಇದೇ ದಿನದಂದು ಬಂದಿದ್ದ ಪ್ರವಾಹಕ್ಕೆ ತಾಲೂಕಿನ ಜನಜೀವನ ಅಕ್ಷರಶ: ನಲುಗಿದ್ದ ಕಹಿ ನೆನಪು ಹಸಿರಾಗಿರುವಾಗಲೇ ಮತ್ತೆ ನೆರೆ ಜನರನ್ನು ಭಯಗ್ರಸ್ತರನ್ನಾಗಿ ಮಾಡಿದೆ.
ಯಲ್ಲಾಪುರ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಗಂಗಾವಳಿ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಎದುರಾಗಿದೆ. ಮುಂದಿನ ನಾಲ್ಕು ದಿನ ಭಾರಿ ಮಳೆ ಆಗುವ ಸಾದ್ಯತೆಗಳಿವೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ತುಂಬಿದ ಪರಿಣಾಮ ಹೆದ್ದಾರಿ ಸಂಚಾರ ಬುಧವಾರ ಬೆಳಿಗ್ಗೆಯಿಂದ ಸ್ಥಗಿತಗೊಂಡಿದೆ. ಮೊಗಟಾ ಗ್ರಾಮದ ಆಂದ್ಲೆ ಬಳಿ ರಾಜ್ಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಈ ಮಾರ್ಗದಿಂದ ಸಾಗುವ ಹಿಲ್ಲೂರು ಅಂಗಡಿಬೈಲ್ ಅಚವೆ ಗ್ರಾಮಗಳ ಸಂಪರ್ಕವು ಕಡಿತವಾಗಿದೆ.
ತಾಲೂಕಿನ ಹಿಚ್ಕಡ ಕುರ್ವೆ, ಮೋಟನ ಕುರ್ವೆ, ದಂಡೆಬಾಗ, ಶಿರಗುಂಜಿ, ವಾಸರೆ, ಕೊಡ್ಸಣಿ, ಆಂದ್ಲೆ, ಡೋಂಗ್ರಿ, ಹೆಗ್ಗಾರ, ವೈದ್ಯ ಹೆಗ್ಗಾರ, ಸುಂಕಸಾಳ, ರಾಮನಗುಳಿಯ ಗಂಗಾವಳಿ ಹೊಳೆ ಬದಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ತಾಲೂಕಾಡಳಿತ ಪೊಲೀಸ ಇಲಾಖೆ, ಅಗ್ನಿಶಾಮಕ, ಅರಣ್ಯ ಇಲಾಖೆ ಸೇರಿದಂತೆ ಆಯಾ ಭಾಗಗಳ ಗ್ರಾಮಸ್ಥರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.