Thursday, August 11, 2022

Latest Posts

ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ನಾಗವರ್ಮರಸನ ಶಾಸನ ಪತ್ತೆ

ಅಂಕೋಲಾ: ತಾಲೂಕಿನ ಅಚವೆ ಸಮೀಪದ ಅಂಗಡಿಬೈಲ್ ಗ್ರಾಮದ ಭಂಡಾರಿಗದ್ದೆಯಲ್ಲಿ ಚಂದ್ರಕಾಂತ ಆಚಾರಿಯವರ ಮನೆ ಎದುರಿನ ಮಾವಿನ ಮರದ ಕೆಳಗೆ ಒಂದು ಶಿಲ್ಪವಿದೆ. ಆಚಾರಿ ಮನೆಯವರಿಂದ ನಿತ್ಯ ಪೂಜೆಗೆ ಒಳಪಡುವ ಈ ಶಿಲ್ಪವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಇದು ತುಂಡಾದ ವೀರಗಲ್ಲು ಶಾಸನದ ಲಲಾಟದ ಭಾಗವಾಗಿದ್ದು ನಾಗವರ್ಮ ಎಂಬ ರಾಜನ ಕಾಲದ ಅಪ್ರಕಟಿತ ಶಾಸನವಾಗಿದೆ ಎಂದು ತಿಳಿಸಿದರು.
ನಾಗವರ್ಮರಸ ಸುಮಾರು ಕ್ರಿ.ಶ. ೧೦೭೦ ರಿಂದ ೧೧೧೩ರ ವರೆಗೆ ಗೋಕರ್ಣವನ್ನು ಕೇಂದ್ರವಾಗಿಟ್ಟುಕೊಂಡು ಹೊನ್ನಾವರ, ಕುಮಟ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲೂಕುಗಳ ಭಾಗದಲ್ಲಿ ಮಹಾಮಂಡಳೇಶ್ವರನಾಗಿ ಸ್ವತಂತ್ರವಾಗಿ ಸಂಪೂರ್ಣ ಪ್ರಾಚೀನ ಹೈವೆ-೫೦೦ ಪ್ರಾಂತ್ಯ ಮತ್ತು ಅದರ ಆಚೀಚಿನ ಪ್ರದೇಶಗಳನ್ನು ಆಳುತ್ತಿದ್ದಂತಹ ಒಬ್ಬ ರಾಜ. ಪ್ರಸ್ತುತ ಶಾಸನದ ಹೊರತು ಹೊನ್ನಾವರ ತಾಲೂಕಿನ ಕೆಕ್ಕಾರ, ಹಳದೀಪುರ, ಕಡಬಾಳ, ಅಂಕೋಲಾ ತಾಲೂಕಿನ ಬಡಗೇರಿ, ಹಾವೇರಿ ಜಿಲ್ಲೆಯ ಗಳಗನಾಥ ಮೊದಲಾದೆಡೆ ದೊರೆತ ಶಾಸನಗಳಲ್ಲಿ ನಾಗವರ್ಮರಸನ ಉಲ್ಲೇಖವಿದೆ. ಹಳದಿಪುರದ ಶಾಸನ ಈತನನ್ನು ಗೋಕರ್ಣ ಪುರವರಾಧೀಶ್ವರ ಎಂದು ಕರೆದಿದೆ ಎನ್ನುವ ವಿಷಯ ತಿಳಿಸಿದರು. ಈಗ ಭಂಡಾರಿಗದ್ದೆಯಲ್ಲಿ ದೊರೆತ ಹೊಸ ಶಾಸನವು ಕೇವಲ ಮೂರು ಸಾಲುಗಳನ್ನೂ ಹೊಂದಿದ್ದರೂ, ಈ ಹಿಂದೆ ದೊರೆತ ಶಾಸನಗಳು ತಿಳಿಸದ ನಾಗವರ್ಮರಸನ ಬಿರುದುಗಳನ್ನು ನಮಗೆ ತಿಳಿಸುತ್ತದೆ ಎಂದರು.
ಶಾಸನಕಾರನು ನಾಗವರ್ಮರಸನನ್ನು ಸಮಸ್ತ ಗುಣಗಣಳೀಕ್ರಿತಮಪ್ಪ ಎಂದರೆ, ಸಕಲ ಸದ್ಗುಣಗಳ ಆಗರವಾಗಿದ್ದ ಒಬ್ಬ ಒಳ್ಳೆಯ ಆಡಳಿತಗಾರ, ಶೂರ-ಧೀರ ಅರಸ, ಧರ್ಮಸುಮೇರು ಅಂದರೆ ನ್ಯಾಯ-ನೀತಿಗಳ ಪರಿಪಾಲಕನಾದ ಧರ್ಮರಾಜ ಸಮಾನ, ಪರನಾರೀಪುತ್ರ ಎಂದರೆ ಪರಸ್ತ್ರೀಯರನ್ನು ತನ್ನ ತಾಯಿಯಂತೆ ಕಾಣುತ್ತ್ತಿದ್ದ, ಕೋಕರಕ್ಷಪಾಲಕಂ ಅಂದರೆ, ಅರಸನು ಪಕ್ಷಿ ಸಂಕುಲವನ್ನೂ ಪ್ರೀತಿಸುವ ರಕ್ಷಿಸುವವನಾಗಿದ್ದ ಎಂದು ಅರ್ಥೈಸಬಹುದಾಗಿದೆ ಎಂದಿದ್ದಾರೆ. ಶಾಸನವನ್ನು ಪರಿಶೀಲಿಸಲು ಅನುವು ಮಾಡಿಕೊಟ್ಟ ಚಂದ್ರಕಾಂತ ಆಚಾರಿ ಕುಟುಂಬದವರಿಗೆ, ಶಾಸನವಿರುವ ಮಾಹಿತಿ ನೀಡಿ ಸ್ಥಳಕ್ಕೆ ಕರೆದುಕೊಂಡು ಹೋದ ಉಪನ್ಯಾಸಕ ರಾಜು ಆಚಾರಿ ತೆಂಕಣಕೇರಿ ಅವರಿಗೆ ಮತ್ತು ಶಾಸನ ಪಾಠ ತಿದ್ದಿ ಅಗತ್ಯ ಮಾರ್ಗದರ್ಶನ ನೀಡಿದ ಡಾ. ರವಿಕುಮಾರ ಕೆ. ನವಲಗುಂದ ಹರಿಹರ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss