ಫೋರ್ಟ್ ಬ್ಲೇರ್: ವಿಶ್ವದ ಪ್ರಮುಖ ಪ್ರವಾಸ ತಾಣಗಳಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವೂ ಒಂದು. ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಯಾರು ತಾನೆ ಮನಸೋತಿಲ್ಲ..! ಅದೆಷ್ಟು ಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆಯೋ.. ಈ ಪ್ರದೇಶಕ್ಕೆ ಭೇಟಿ ನೀಡಬೇಕೆಂಬ ಆಸೆ ಬಹುತೇಕ ಎಲ್ಲರಲ್ಲೂ ಇರುತ್ತದೆ.
ಹಾಗಾಗಿ ಈ ಪ್ರದೇಶಕ್ಕಿರುವ ಬೇಡಿಕೆ ಕಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2017ರಲ್ಲಿ ಅಂಡಮಾನ್ ನಲ್ಲಿ ರೈಲು ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಹಸಿರು ನಿಶಾನೆ ನೀಡಿತ್ತು. ಶೀಘ್ರವೇ ಈ ಯೋಜನೆ ಪೂರ್ಣಗೊಳ್ಳಲಿದ್ದು, ಪ್ರವಾಸಿಗರು ರೈಲಿನಲ್ಲಿ ಅಂಡಮಾನ್ ದರ್ಶನ ಮಾಡುವ ಕಾಲ ಸಮೀಪಿಸಿದೆ.
ಯೋಜನೆ ಏನು ?: ಸುಮಾರು 240 ಕಿ.ಮೀ. ರೈಲ್ವೆ ಮಾರ್ಗದ ಮೂಲಕ ಅಂಡಮಾನ್-ನಿಕೋಬಾರ್ ನ ಎರಡು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಮಾರ್ಗದುದ್ದಕ್ಕೂ ಸೇತುವೆ ಹಾಗೂ ರೈಲ್ವೆ ನಿಲ್ದಾಣಗಳು ಇರಲಿವೆ. ಅಂಡಮಾನ್ – ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಅಂಡಮಾನ್ನ ಉತ್ತರ ಭಾಗದಲ್ಲಿರುವ ಡಿಗ್ಲಿಪುರಕ್ಕೆ ರೈಲು ಸಂಪರ್ಕ ಕಲ್ಪಿಸಲಾಗುತ್ತಿದ್ದು, ಇದು ದ್ವೀಪದ ಮೊದಲ ರೈಲು ಸಂಪರ್ಕ ಎನಿಸಿಕೊಳ್ಳಲಿದೆ.
ಪ್ರಸ್ತುತ ಪೋರ್ಟ್ ಬ್ಲೇರ್ ಹಾಗೂ ಡಿಗ್ಲಿಪುರದ ನಡುವೆ 350 ಕಿ.ಮೀ. ಅಂತರದ ಬಸ್ ಸಂಪರ್ಕವಿದ್ದು, 14 ತಾಸುಗಳ ಪ್ರಯಾಣ ಇದಾಗಿದೆ. ಇನ್ನು ಸಮುದ್ರ ಮೂಲಕ ತೆರಳಬೇಕೆಂದರೆ 24 ತಾಸು ಬೇಕಾಗಬಹುದು. ಇನ್ನು ಈ ಎರಡು ನಗರಗಳಿಗೆ ವಿಮಾನ ಸಂಪರ್ಕವಿಲ್ಲ. ಆದರೆ ರೈಲಿನಲ್ಲಿ ಕೇವಲ 3 ತಾಸಿನ ಪ್ರಯಾಣ.
ಖರ್ಚು – ವೆಚ್ಚ: ಒಟ್ಟು 2,413 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಶೇ. -9.64ರಷ್ಟು ಹೂಡಿಕೆ ಮೇಲೆ ನಷ್ಟವಾಗಲಿದೆ. ಆದರೂ, ಯೋಜನೆ ವಿಭಿನ್ನ ಹಾಗೂ ಪ್ರಮುಖವಾಗಿರುವುದರಿಂದ ಭಾರತೀಯ ರೈಲ್ವೆ ಯೋಜನೆಗೆ ಹಸಿರು ನಿಶಾನೆ ನೀಡಿತ್ತು.
ಲಾಭವೇನು?: ಪೋರ್ಟ್ ಬ್ಲೇರ್ ಹಾಗೂ ಡಿಗ್ಲಿಪುರದಲ್ಲಿರುವ ರಾಸ್ ಮತ್ತು ಸ್ಮಿತ್ ದ್ವೀಪಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಆದರೆ, ಈ ಎರಡು ಪ್ರದೇಶಗಳಿಗೆ ತೆರಳುವುದಕ್ಕೆ ಲಕ್ಷಾಂತರ ಪ್ರವಾಸಿಗರು ಪ್ರತಿ ವರ್ಷ ಬಹಳ ಕಷ್ಟಪಡುತ್ತಾರೆ. ಹಾಗಾಗಿ ರೈಲ್ವೆ ಸಂಪರ್ಕದಿಂದ ಪ್ರವಾಸ ಸುಗಮವಾಗಲಿದ್ದು, ಪ್ರಕೃತಿ ಮಡಿಲಿನಲ್ಲೇ ಸಾಗುವ ವಿನೂತನ ಅನುಭವ ಪ್ರವಾಸಿಗರಿಗೆ ಸಿಗಲಿದೆ. ಜತೆಗೆ ಒಮ್ಮೆ ಈ ಯೋಜನೆ ಪೂರ್ಣಗೊಂಡರೆ, ಪ್ರವಾಸಿಗರ ಪ್ರಮಾಣದಲ್ಲಿ ಶೇ. 4.5ರಷ್ಟು ಹೆಚ್ಚಾಗುವ ನಿರೀಕ್ಷೆಯೂ ಇದೆ. ಇದರರ್ಥ ವರ್ಷಕ್ಕೆ 6 ಲಕ್ಷ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಹಾಗಾಗಿ ದೀರ್ಘಾವಧಿಯಲ್ಲಿ ಯೋಜನೆಯಿಂದ ಲಾಭವಾಗಲಿದೆ ಎಂಬುದು ಸರ್ಕಾರದ ನಂಬಿಕೆ.