Sunday, August 14, 2022

Latest Posts

ಅಂತರ ಜಿಲ್ಲಾ ದರೋಡೆಕೋರರ ಬಂಧನ: ನಾಲ್ಕು ವಾಹನ ಸಹಿತ 12 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಮಡಿಕೇರಿ: ಇತ್ತೀಚೆಗೆ ವೀರಾಜಪೇಟೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ ನಾಲ್ಕು ವಾಹನ ಸಹಿತ 12 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಎಮ್ಮೆಮಾಡು ನಿವಾಸಿಗಳಾದ ಇಬ್ರಾಹಿಂ ಅಲಿಯಾಸ್ ಖಲೀಲ್, ಕಡುವಣಿ ಅಶ್ರಫ್ ಹಾಗೂ ಮುಸ್ತಾಫ ಎಂದು ಗುರುತಿಸಲಾಗಿದೆ.
ಮೇ 21ರಂದು ವೀರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದು, ಈ ಪ್ರಕರಣ ಜಿಲ್ಲೆಯ ಜನರಲ್ಲಿ ಭಯ ಉಂಟುಮಾಡಿತ್ತು.
ಈ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ಜೂ.9ರಂದು ಎಮ್ಮೆಮಾಡು ನಿವಾಸಿಯಾದ ಇಬ್ರಾಹಿಂ ಅಲಿಯಾಸ್ ಖಲೀಲ್ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ 800 ಕಾರನ್ನು ವಶಪಡಿಸಿಕೊಂಡಿತ್ತಲ್ಲದೆ, ತನಿಖೆ ಮುಂದುವರೆಸಿ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಎಮ್ಮೆಮಾಡು ನಿವಾಸಿಗಳಾದ ಕಡುವಣಿ ಅಶ್ರಫ್ ಮತ್ತು ಮುಸ್ತಾಫ ಅವರನ್ನು ಜೂ.14ರಂದು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳು ಈ ಹಿಂದೆ ಮೈಸೂರು ಜಿಲ್ಲೆ ಹಾಗೂ ಕೊಡಗಿನ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಇದೇ ಆರೋಪಿಗಳು ಎರಡು ತಿಂಗಳ ಹಿಂದೆ ವೀರಾಜಪೇಟೆ ನಗರದ ಶ್ರೀನಿವಾಸ ಎಂಬವರ ಮನೆಯಲ್ಲಿ ಮನೆ ಕಳ್ಳತನ ಮಾಡಿದ್ದು, ಅಲ್ಲಿಂದ ಕದ್ದೊಯ್ದಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಡಿಕೇರಿ ಗ್ರಾಮಾಂತರ ಠಾಣೆ ಹಾಗೂ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಫಿ ಮತ್ತು ಕರಿಮೆಣಸು ಕಳ್ಳತನದ ಒಂದೊಂದು ಪ್ರಕರಣಗಳಲ್ಲೂ ಭಾಗಿಯಾಗಿದ್ದು ಕಂಡು ಬಂದಿದ್ದು ಈ ಪ್ರಕರಣಗಳಲ್ಲಿ 3 ಚೀಲ ಕಾಫಿ ಹಾಗೂ 400 ಕೆ.ಜಿ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ತಿಳಿಸಿದ್ದಾರೆ.
ಈ ಆರೋಪಿಗಳ ದಸ್ತಗಿರಿಯಿಂದ ವೀರಾಜಪೇಟೆ ನಗರದ 2, ಮಡಿಕೇರಿ ಗ್ರಾಮಾಂತರ ಠಾಣೆ ಹಾಗೂ ನಾಪೋಕ್ಲು ಪೊಲೀಸ್ ಠಾಣೆಯ ತಲಾ ಒಂದು ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್, ಕಾಫಿ, ಕಾಳುಮೆಣಸು ಮತ್ತು 3 ಕಾರು ಒಂದು ಗೂಡ್ಸ್ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಕೃತ್ಯಕ್ಕೆ ಸ್ಕೆಚ್: ಇದೇ ಆರೋಪಿಗಳು ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಇತರ ಭಾಗಗಳಲ್ಲಿ ಶ್ರೀಮಂತರ ಮನೆಗಳನ್ನು ಗುರುತಿಸಿ ದರೋಡೆ ಮಾಡುವ ಯೋಜನೆಗಳನ್ನು ಹೊಂದಿದ್ದರೆನ್ನಲಾಗಿದ್ದು, ಇವರ ಬಂಧನದಿಂದ ಮುಂದೆ ನಡೆಯಬಹುದಾಗಿದ್ದ ಹಲವಾರು ಘೋರ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಈ ತಂಡ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ವೀರಾಜಪೇಟೆ ಸಿ.ಪಿ.ಐ ಕ್ಯಾತೇಗೌಡ, ವೀರಾಜಪೇಟೆ ನಗರ ಠಾಣಾ ಪಿ.ಎಸ್.ಐ ಹೆಚ್.ಎಸ್ ಬೋಜಪ್ಪ ಅವರ ನೇತೃತ್ವದಲ್ಲಿ ಪ್ರೊಬೆಷನರಿ ಪಿ.ಎಸ್.ಐ ಗಳಾದ ವಿನಯ ಕುಮಾರ್ ಸಿ, ಎಸ್.ಅಭಿಜಿತ್, ಮಂಜುನಾಥ.ಎಸ್, ಎ.ಎಸ್.ಐ ಗಳಾದ ಎಂ.ಸಿ ನಂಜಪ್ಪ, ಎಂ.ಪಿ ನಾಣಿಯಪ್ಪ, ಸಿ.ವಿ ಶ್ರೀಧರ್, ಸಿಬ್ಬಂದಿಗಳಾದ ಬಿ.ಎಂ ರಾಮಪ್ಪ, ಹೆಚ್.ಸಿ ಸುರೇಂದ್ರ, ಕೆ.ಡಿ ಮನು, ಕೆ.ಎ ಅಬ್ದುಲ್ ಮಜೀದ್, ಮುಸ್ತಾಫ, ಪಿ.ಯು ಮುನೀರ್, ಸಂತೋಷ್ ದೊಡ್ಡಮನಿ, ಎಂ.ಚಂದ್ರಶೇಖರ, ಬಿ.ಟಿ ಪ್ರದೀಪ, ಕೆ.ಪಿ ರಮೇಶ್, ಎನ್.ಎಸ್ ಲೊಕೇಶ, ಗಿರೀಶ, ಈರಪ್ಪ ವಠಾರ, ಮಹೇಶ, ಯೋಗೇಶ, ಪ್ರವೀಣ , ರಾಜೇಶ್ ಹಾಗೂ ಗಿರೀಶ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss