ಅಂತಾರಾಜ್ಯ ಗಡಿ ಬಂದ್ : ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಪರಿಸ್ಥಿತಿ ಭಗವಂತನಿಗೇ ಪ್ರೀತಿ…

0
96

ಬೆಂಗಳೂರು: ಪ್ರತಿ ನಿತ್ಯ ಸಾವಿರಾರು ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿಯನ್ನು ರಾಜಧಾನಿಗೆ ಪೂರೈಸುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಪರಿಸ್ಥಿತಿ ಕಳವಳಕಾರಿಯಾಗಿದೆ.
ರಾಜಧಾನಿಗೂ ಕಡಿಮೆ ಮಾಲು
ಎಲೆಕೋಸು, ಟಮೋಟಾ, ಆಲುಗಡ್ಡೆ, ಸಪೋಟ, ದ್ರಾಕ್ಷಿ – ಇವೆಲ್ಲವೂ ರಾಜಧಾನಿಯ ಕೃಷ್ಣರಾಜೇಂದ್ರ ಹಾಗೂ ಯಶವಂತಪುರ ಸಗಟು ಮಾರುಕಟ್ಟೆಗೆ ಪೂರೈಕೆಯಾಗುತ್ತೆ. ಆದರೆ ಈಗ ಕೋವಿಡ್ ಸೋಂಕಿನ ಪರಿಣಾಮವಾಗಿ ಶೇ ೧೦ ರಿಂದ ೨೦ರಷ್ಟು ಮಾತ್ರ ಈ ಎರಡೂ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದೆ. ಮೂರು ದಿನಗಳ ಹಿಂದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಣ್ಣು ಅ ಮತ್ತು ತರಕಾರಿ ವರ್ತಕರ ಸಂಘದ ಜೊತೆ ಜಿಲ್ಲಾಡಳಿತ ಸಭೆ ನಡೆಸಿ ಪಾಸ್ ನೀಡಿದ್ದರೂ, ಬೆಂಗಳೂರಿಗೆ ಸರಕು ರವಾನೆ ಮಾಡಲು ಲಾರಿ, ಟ್ರಾಕ್ಟರ್ ಹಾಗೂ ಸರಕು ಟೆಂಪೋಗಳ ಬಾಡಿಗೆ ಸಮಸ್ಯೆ ತಲೆದೋರಿದೆ. ಸ್ವಂತ ಲಾರಿ, ಟ್ರಾಕ್ಟರ್ ಹೊಂದಿರುವ ಕೆಲವೇ ಮಂದಿ ರೈತರು ಪೊಲೀಸ್ ಪರವಾನಗಿ ಪಡೆದು ಬೆಂಗಳೂರಿನ ಮಾರುಕಟ್ಟೆಗೆ ತರಕಾರಿ ಮತ್ತು ಹಣ್ಣು ಪೂರೈಸುತ್ತಿದ್ದಾರೆ.
ನಿತ್ಯವೂ ಕೋಲಾರದಿಂದ ಚೆನ್ನೆ , ಸೇಲಂ ಮತ್ತು ತಿರುಪತಿಗೆ ಟಮೋಟಾ ಮತ್ತು ಕೊತ್ತಂಬರಿ ಸೊಪ್ಪು ಪೂರೈಕೆಯಾಗುತ್ತಿದ್ದು ಈಗ ತಮಿಳುನಾಡು ಮತ್ತು ಆಂಧ್ರದ ಗಡಿಭಾUದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಬ್ದವಾಗಿರುವುದರಿಂದ ರೈತರು ಬೆಳೆದ ಫಸಲನ್ನು ಬೀದಿಗೆ ಎಸೆಯುವಂತಾಗಿದೆ.
ಮುತ್ತಿನ ನಗರಿಗೆ ಹೂವಿಲ್ಲ
ಚಿಕ್ಕಬಳ್ಳಾಪುರದ ಎಂ. ಜಿ. ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಿಂದ ಹೈದರಾಬಾದ್‌ಗೆ ನಿತ್ಯವೂ ನೂರಾರು ಟನ್ ಸೇವಂತಿಗೆ ಹಾಗೂ ಕನಕಾಂಬರ ರವಾನೆಯಾಗುತ್ತದೆ. ಆದರೆ ತೆಲಂಗಾಣದಲ್ಲಿ ಕರೋನಾ ರುದ್ರರೂಪ ತಾಳಿರುವುದರಿಂದ ಇಲ್ಲಿನ ಸ್ಥಳೀಯ ಮಾರುಕಟ್ಟೆ ವ್ಯಾಪಾರಿಗಳು ಮತ್ತು ರೈತರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ನಂದಿ, ಬೈರನಾಯಕನಹಳ್ಳಿ, ತಿರನಹಳ್ಳಿ, ಹೊಸಹುಡ್ಯ, ಪಟ್ರೇನಹಳ್ಳಿ, ಜಾತವಾರ, ನಾಯನಹಳ್ಳಿ, ಪೆರೇಸಂದ್ರ ಮೊದಲಾದ ಗ್ರಾಮಗಳಲ್ಲಿ ಕೈಗೆ ಬಂದ ದ್ರಾಕ್ಷಿ ಫಸಲನ್ನು ಬಿಡಿಸಲಾಗದೆ ರೈತರು ಒದ್ದಾಡುವಂತಾಗಿದೆ. ಕನಿಷ್ಠ ಶೀತಲ ಕೇಂದ್ರಗಳಲ್ಲಿ ರೈತರು ಬೆಳೆದ ತರಕಾರಿಯನ್ನು ಸಂರಕ್ಷಿಸಿಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ರೈತರನ್ನು ಆರ್ಥಿಕವಾಗಿ ಪಾತಾಳಕ್ಕೆ ತಳ್ಳುವಂತಾಗಿದೆ.
ಗೌರಿಬಿದನೂರಿನಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ಪಡೆದಿದ್ದು ಚಿಕ್ಕಬಳ್ಳಾಪುರ ಬಿಗಿ ಬಂದೋಬಸ್ತ್ ಮಾಡಿರುವುದರಿಂದ ಜಿಲ್ಲೆಯ ರೈತರ್‍ಯಾರೂ ಮನೆ ಬಿಟ್ಟು ಹೊರಗಡೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here