Sunday, June 26, 2022

Latest Posts

ಅಂದಗೆಟ್ಟ ಗೋಡೆಗಳ ಮೇಲೆ ಬಣ್ಣದ ಚಿತ್ತಾರ: ಸ್ಟ್ರೀಟ್ ಆರ್ಟ್ ನಿಂದ ಗೋಡೆ ಮೇಲೆ ಕಲಾತ್ಮಕ ಚಿತ್ರ

ಗೋಡೆ ಮೇಲೆ ಕಲಾತ್ಮಕ ಚಿತ್ರ ಬರೆಯುವ ಕಲೆ ರೋಮನ್ ವಾಸ್ತುಶಿಲ್ಪದಿಂದ ಆರಂಭವಾಗಿದೆ. ಬಣ್ಣಗಳಿಲ್ಲದ್ದರಿಂದ ಆಗ ಕೆತ್ತನೆ ಮಾಡಲಾಗುತ್ತಿತ್ತು ಮತ್ತು ನೈಸರ್ಗಿಕವಾಗಿ ಸಿಗುವ ಬಣ್ಣಗಳನ್ನು ಅವರು ಬಳಸುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಗೋಡೆ ಚಿತ್ರಗಳು ಬೆಳೆದು ಬಂದ ಹಾದಿ ಅತ್ಯದ್ಭುತ. ಬೆಳವಣಿಗೆಗಳಿಗೆ ಒಗ್ಗುತ್ತಾ ಬಂದಿರುವ ಕಲಾವಿದರು ಹೆಚ್ಚಾಗಿ ತಮ್ಮ ಪರಿಚಯವನ್ನು ಗೋಡೆಯ ಮೇಲೆ ನಮೂದಿಸುವುದಿಲ್ಲ.

-ಮೇಘನಾ ಶೆಟ್ಟಿ, ಶಿವಮೊಗ್ಗ

ಗೋಡೆ ಮೇಲೆ ಚಿತ್ತಾರ! ಈ ವಾಕ್ಯ ಕೇಳಿದಾಗ ಏನೇನೋ ನೆನಪಿಗೆ ಬರುತ್ತದೆ. ಚಿಕ್ಕವರಿದ್ದಾಗ ಗೋಡೆಯನ್ನೇ ಬೋರ್ಡ್ ಮಾಡಿಕೊಂಡು ಮನಸ್ಸಿಗೆ ಬಂದದ್ದು ಬರೆದದ್ದು, ಬಾಡಿಗೆ ಮನೆಯ ಗೋಡೆ ಮೇಲೆ ಎಬಿಸಿಡಿ,ಅಆಇಈ, ಮಗ್ಗಿ ಕಲಿತದ್ದು, ಈ ನಮ್ಮ ಗೋಡೆ ಚಿತ್ತಾರ ಕಾಣಬಾರದೆಂದು ಅಮ್ಮ ಓನರ್ ಕಣ್ಣು ತಪ್ಪಿಸಿ ಸುಂದರವಾದ ಕರ್ಟನ್ ಒಂದನ್ನು ಇಳಿಬಿಟ್ಟಿದ್ದು.

ಆಗೆಲ್ಲ ಸುಂದರವಾದ ಗೋಡೆ ಮೇಲೆ ಕೆಟ್ಟ ಚಿತ್ರಗಳನ್ನು ಬರೆದು ಗೋಡೆ ಹಾಳುಮಾಡುತ್ತಿದ್ದೆವು. ಆದರೆ ಈಗ ಕೆಟ್ಟ ಗೋಡೆಗಳ ಮೇಲೆ ಸುಂದರ ಚಿತ್ರಗಳನ್ನು ಬರೆದು ಗೋಡೆಗೆ ಅಂದ ನೀಡಲಾಗುತ್ತಿದೆ. ಇದಕ್ಕೆ ಸ್ಟ್ರೀಟ್ ಆರ್ಟ್ ಎನ್ನುತ್ತಾರೆ. ದೊಡ್ಡ ಊರುಗಳ ಪಾಳು ಬಿದ್ದ ಗೋಡೆಗಳೆಂದರೆ ಜನರಿಗೆ ಪಾನ್ ತಿಂದು ಉಗಿಯುವ, ಕಸ ಹಾಕುವ, ಮೂತ್ರ ವಿಸರ್ಜಿಸುವ ಜಾಗ. ರಸ್ತೆ ಬದಿಯ ದೊಡ್ಡ ಗೋಡೆಗಳ ಬಳಿ ಇಲ್ಲಿ ಮೂತ್ರ ವಿಸರ್ಜಿಸಿದವರು ಕತ್ತೆಗೆ ಸಮಾನ, ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಬರೆದಿರುವುದನ್ನೂ ಸಾಮಾನ್ಯವಾಗಿ ನೋಡಿರುತ್ತೇವೆ. ಅದನ್ನೂ ಬಿಟ್ಟರೆ ದೇವರ ಮೇಲಾದರೂ ಭಯ ಇರಲೇಬೇಕು ಎಂದು ದೇವರ ಫೋಟೊಗಳನ್ನು ಅಂಟಿಸಿರುತ್ತಾರೆ. ಆದರೂ ಗೋಡೆಗಳ ಅಂದಗೆಡಿಸುವಲ್ಲಿ ಜನ ಸತತ ಪ್ರಯತ್ನ ಮಾಡುತ್ತಾರೆ.

ಇಂಥವರ ಮಧ್ಯೆಯೂ ಪಾಳು ಬಿದ್ದ, ಅಂದಗೆಟ್ಟ ಗೋಡೆಗಳಿಗೆ ಕ್ರಿಯಾತ್ಮಕವಾಗಿ ಬಣ್ಣ ಬಳಿಯುವವರು ಇದ್ದಾರೆ. ಗೊಡೆ ಪಕ್ಕ ಹೋದರೂ ಒಮ್ಮೆಯೂ ಗೋಡೆ ಕಡೆ ಮುಖ ಮಾಡದ ಜನರಿಗೆ ಅದೇ ಗೋಡೆಯ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳೋಣ ಎನಿಸುವಂತಿರುತ್ತದೆ ಈ ಗೋಡೆ ಮೇಲಿನ ಚಿತ್ತಾರ. ಅಬ್ರಪ್ಟ್ ಪೇಂಟಿಂಗ್ಸ್, ವ್ಯಂಗ್ಯ ಚಿತ್ರಗಳು, ಸಾಧಕರ ಪೋರ್ಟ್‌ರೇಟ್ಸ್, ಸಾಮಾಜಿಕ ಸಂದೇಶ ಕೊಡುವಂಥ ಚಿತ್ರಗಳು ಹೀಗೆ ನಾನಾ ರೀತಿಯ ಸೃಜನಾತ್ಮಕ ಸ್ಟ್ರೀಟ್ ವಾಲ್ ಪೇಂಟಿಂಗ್‌ಸ್‌ ಇವೆ. ಕೆಲವರು ತಮ್ಮ ಸ್ವಇಚ್ಛೆಯಿಂದ ಗುಂಪು ಕಟ್ಟಿಕೊಂಡು ಗೋಡೆಗೆ ಬಣ್ಣ ಬಳಿಯುತ್ತಾರೆ. ಇದೊಂದು ರೀತಿಯ ಹವ್ಯಾಸ. ಇನ್ನು ಕೆಲವರು ಕಲಾವಿದರನ್ನು ಸಂಪರ್ಕಿಸಿ ತಮ್ಮಿಷ್ಟದ ಚಿತ್ರ ಬಿಡಿಸುವಂತೆ ಹೇಳುತ್ತಾರೆ. ಇನ್ನು ರಸ್ತೆ ಅಕ್ಕಪಕ್ಕದ ಗೋಡೆಗಳು, ಮೆಟ್ರೋ, ಬಸ್ ಸ್ಟಾಂಡ್‌ಗಳಲ್ಲಿ ಪೇಂಟಿಂಗ್ ಮಾಡಲು ಅಥವಾ ಮಾಡಿಸಲು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ನೂರು ಪದಗಳಿಗಿಂತ ಒಂದು ಚಿತ್ರ ವಾಸಿ ಎನ್ನುತ್ತಾರೆ. ಪದಗಳಲ್ಲಿ ವರ್ಣಿಸಲಾಗದ್ದು ಒಂದು ಚಿತ್ರ ಮಾಡಿಮುಗಿಸುತ್ತದೆ.

ಗೋಡೆ ಮೇಲೆ ಕಲಾತ್ಮಕ ಚಿತ್ರ ಬರೆಯುವ ಕಲೆ ರೋಮನ್ ವಾಸ್ತುಶಿಲ್ಪದಿಂದ ಆರಂಭವಾಗಿದೆ. ಬಣ್ಣಗಳಿಲ್ಲದ್ದರಿಂದ ಆಗ ಕೆತ್ತನೆ ಮಾಡಲಾಗುತ್ತಿತ್ತು ಮತ್ತು ನೈಸರ್ಗಿಕವಾಗಿ ಸಿಗುವ ಬಣ್ಣಗಳನ್ನು ಅವರು ಬಳಸುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಗೋಡೆ ಚಿತ್ರಗಳು ಬೆಳೆದು ಬಂದ ಹಾದಿ ಅತ್ಯದ್ಭುತ. ಬೆಳವಣಿಗೆಗಳಿಗೆ ಒಗ್ಗುತ್ತಾ ಬಂದಿರುವ ಕಲಾವಿದರು ಹೆಚ್ಚಾಗಿ ತಮ್ಮ ಪರಿಚಯವನ್ನು ಗೋಡೆಯ ಮೇಲೆ ನಮೂದಿಸುವುದಿಲ್ಲ.

ಗೋಡೆ ಚಿತ್ತಾರದಿಂದ ಕವಿ ಪರಿಚಯ: ಇಷ್ಟೇ ಅಲ್ಲದೆ ಈಗಿನ ಪೀಳಿಗೆಯ ಮಕ್ಕಳಿಗೆ ಸಾಹಿತಿಗಳನ್ನು ಪರಿಚಯಿಸಲು ಗೋಡೆಗಳ ಮೇಲೆ ಸಾಹಿತಿಗಳ ಪೋರ್ಟೇಟ್, ಕೃತಿಗಳ ಹೆಸರು ಹಾಗೂ ಒಂದೆರಡು ವಾಕ್ಯಗಳನ್ನು ಬರೆಯುವುದೂ ಇದೆ. ಎಷ್ಟೋ ಮಂದಿಗೆ ಕಥೆ, ಕವನ, ಕವಿಗಳು, ಕಾದಂಬರಿಕಾರರು, ಸಾಹಿತಿಗಳೆಂದರೆ ಯಾರೆಂದೂ ತಿಳಿದಿರುವುದಿಲ್ಲ. ಮಕ್ಕಳು ತರಗತಿಯ ಪಾಠಗಳಲ್ಲಿ ಬರುವವರ ಬಗ್ಗೆ ಅಲ್ಪಸ್ವಲ್ಪ ತಿಳಿದಿರುತ್ತಾರೆ. ದಾಂಡೇಲಿಯ ಕಲ್ಪವೃಕ್ಷ ಹೋಂ ಸ್ಟೇ ಗೋಡೆ ಮೇಲೆ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕೃತಿ ಬಗ್ಗೆ ಪೋರ್ಟೇಟ್ ಗೋಡೆ ಚಿತ್ರವಾಗಿದೆ. ರಸ್ತೆಯಲ್ಲಿ ಓಡಾಡುವ ಜನ ಒಮ್ಮೆ ಕಣ್ಣು ಹಾಯಿಸಿದಾಗ ಇವರು ಯಾರು, ಈ ಕೃತಿಯಲ್ಲಿ ಏರಬಹುದು ಎಂಬ ಕುತೂಹಲ ಖಂಡಿತ ಮೂಡುತ್ತದೆ.

ಸ್ಟ್ರೀಟ್ ಆರ್ಟ್ ಉತ್ಸವ:  ಸ್ಟ್ರೀಟ್ ಇಂಡಿಯಾ ಫೌಂಡೇಶನ್ ಲಾಭದ ಉದ್ದೇಶವಿಲ್ಲದೆ ಕಲೆಗಾಗಿ ಶ್ರಮಿಸುವ ಸಂಸ್ಥೆ. ಈ ಸಂಸ್ಥೆ ಕಲೆಯನ್ನು ಎಲ್ಲೆಡೆ ಪ್ರದರ್ಶಿಸಲು ಸಾರ್ವಜನಿಕ ಸ್ಥಳಗಳನ್ನು ಅನುಮತಿ ಮೇರೆಗೆ ಬಳಸುತ್ತದೆ. ದಿಲ್ಲಿ, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರಿನ ಬಹುತೇಕ ಕಟ್ಟಡಗಳ ಮೇಲೆ ಇವರ ಕಲೆ ಕಾಣಬಹುದು, ದಿಲ್ಲಿಯಲ್ಲಿ ಸಂಸ್ಥೆಯಿಂದ ಸ್ಟ್ರೀಟ್ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ದೇಶದ 25 ಅತ್ಯುನ್ನತ ಕಲಾವಿದರನ್ನು ಕರೆತರಲಾಗುತ್ತದೆ. ಈ ಕಲಾವಿದರು ತಿಂಗಳುಗಟ್ಟಲೆ ಒಂದೆ ಜಾಗದಲ್ಲಿ ಇದ್ದು, ಗೋಡೆಗಳ ಮೇಲೆ ತಮ್ಮ ಕೈಚಳಕ ತೋರಿಸುತ್ತಾರೆ. ಲೋಧಿ ಕಾಲೋನಿ ಭಾರತದ ಮೊಟ್ಟಮೊದಲ ಕಲಾ ಜಿಲ್ಲೆ. ಒಂದು ಜಿಲ್ಲೆಯನ್ನೇ ಕಲಾಜಿಲ್ಲೆಯಾಗಿ ಪರಿವರ್ತಿಸಿದ ಇವರ ಕಲಾಭಕ್ತಿಗೆ ಮೆಚ್ಚಲೇಬೇಕು. ಈ ಪ್ರಕ್ರಿಯೆಯ ಶ್ರೇಯ ಲೋಧಿಯ ನಿವಾಸಿಗಳಿಗೂ ಸಲ್ಲುತ್ತದೆ. ಕಲಾವಿದರು ನಿಮ್ಮ ಮನೆಯ ಗೋಡೆಗಳನ್ನು ಹೀಗೆ ಪರಿವರ್ತಿಸಲಾಗುವುದು ಎಂದಾಗ ಯಾವುದೇ ವಿರೋಧ ಒಡ್ಡದೆ ಸಂತೋಷದಿಂದಲೇ ಜನ ಒಪ್ಪಿಗೆ ಸೂಚಿಸಿದ್ದಾರೆ. ಈ ಕಲೆಗೆ ಸರ್ಕಾರದ ಸಹಾಯವೂ ಇದೆ. ಪೇಂಟಿಂಗ್ ಮಾಡುವುದರ ಜೊತೆಗೆ ಪೇಂಟಿಂಗ್ ಕಾರ್ಯಾಗಾರಗಳನ್ನು ಈ ಸಂಸ್ಥೆ ಹಮ್ಮಿಕೊಳ್ಳುತ್ತದೆ. ಕಾರ್ಯಾಗಾರದಲ್ಲಿ ಉತ್ಸಾಹವಿರುವ ಮಕ್ಕಳಿಗೆ ಸ್ಟ್ರೀಟ್ ಆರ್ಟ್‌ಗಳ ಬಗ್ಗೆ ತಿಳಿಸಿಕೊಡುತ್ತಾ ಮಕ್ಕಳಿಂದಲೇ ಬಣ್ಣ ಬಳಿಸುತ್ತಾರೆ. ಇತ್ತೀಚೆಗಷ್ಟೇ ಚೆನ್ನೈನ ಗೋಡೆಯೊಂದರ ಮೇಲೆ ಮಕ್ಕಳ ಜೊತೆಗೂಡಿ ಪೇಂಟಿಂಗ್ ಮಾಡಲಾಗಿದೆ.

ಸ್ಟ್ರೀಟ್ ಆರ್ಟ್ ವಿಧಗಳು: ಸ್ಟ್ರೀಟ್ ಆರ್ಟ್ ಎಂದರೆ ಕೇವಲ ಗೋಡೆ ಮೇಲೆ ಬಣ್ಣ ಬಳಿಯುವುದಷ್ಟೇ ಅಲ್ಲ. ಸ್ಟ್ರೀಟ್ ಆರ್ಟ್‌ನಲ್ಲಿ ಹಲವಾರು ವಿಧಗಳಿವೆ.

ಗ್ರಾಫಿಟಿ – ಸಾಮಾನ್ಯವಾಗಿ ಎಲ್ಲ ಗೋಡೆಗಳ ಮೇಲೆ ಹೆಚ್ಚಾಗಿ ಕಾಣುವುದು ಗ್ರಾಫಿಟಿ. ಇದರಲ್ಲಿ ಗೋಡೆಯ ಮೇಲೆ ಪದಗಳ ಚಿತ್ತಾರ ಅಥವಾ ಬಣ್ಣಗಳ ಅಬ್ಸ್ಟ್ರಾಕ್ಟ್ ಪೇಂಟಿಂಗ್ ಇರುತ್ತದೆ. ಹೆಚ್ಚಿನ ಬಣ್ಣಗಳು ಎದ್ದು ಕಾಣುವಂಥದ್ದಾಗಿರುತ್ತದೆ. ಜನ ಈ ರೀತಿಯ ಹಿನ್ನೆಲೆಯಲ್ಲಿ ಫೋಟೊ ತೆಗೆಸಿಕೊಳ್ಳಲು ಬಯಸುತ್ತಾರೆ.

ಶಿಲ್ಪಕಲೆ– ಈ ಪ್ರಕಾರ ಸ್ವಲ್ಪ ಜಟಿಲ. ಇದು ಥ್ರೀಡಿಯಾಗಿರುತ್ತದೆ. ರಸ್ತೆಗಳ ಮೇಲೆ, ದೊಡ್ಡ ಕಟ್ಟಡಗಳ ಮುಂದೆ ಇವನ್ನು ಕಾಣಬಹುದು. ಸಾಮಾನ್ಯವಾಗಿ, ಕಲ್ಲು,ಮರ ಅಥವಾ ಮೂಳೆಗಳನ್ನು ಬಳಸಿ ಈ ಕಲಾ ಕೃತಿಗಳನ್ನು ನಿರ್ಮಿಸಲಾಗುತ್ತದೆ. ಇಲ್ಲಿಯ ಕಲಾಕೃತಿಗಳಿಗೆ ಇತಿಹಾಸ ಇರುತ್ತದೆ.

ಗ್ರಾಫಿಟಿ ಥ್ರೀಡಿ– ಇದೊಂದು ಸೂಕ್ಷ್ಮ ಕಲೆ. ಹಾಳೆಯ ಮೇಲೆ ಥ್ರೀಡಿ ಚಿತ್ರದಂತೆಯೇ ಗೋಡೆಯ ಮೇಲೂ ಥ್ರೀಡಿ ಚಿತ್ರ ಮಾಡ ಲಾಗುತ್ತದೆ. ಈ ಚಿತ್ರಗಳು ಕಾಣುವುದು ಅಪರೂಪ.

ಸ್ಪ್ರೇ ಬಣ್ಣಗಳ ಭಿತ್ತಿಚಿತ್ರ– ಈ ಬಗೆ ಪೇಂಟಿಂಗ್‌ನಲ್ಲಿ ಮೊದಲು ಚಿತ್ರ ಬರೆದು ನಂತರ ಬಣ್ಣ ತುಂಬುವುದಿಲ್ಲ. ನೇರ ಬಣ್ಣದ ಸ್ಪ್ರೇಗಳನ್ನು ಬಳಸಿ ಗೋಡೆಗಳ ಮೇಲೆ ಬಳಿಯಲಾಗುತ್ತದೆ. ಇವು ಆಕರ್ಷಕ ಹಾಗೂ ನೈಜವಾಗಿ ಕಾಣುತ್ತವೆ.

ಸೈಡ್‌ವೇ ಚಾಕ್ ಆರ್ಟ್– ಇದು ಎಲ್ಲಕ್ಕಿಂತ ವಿಭಿನ್ನವಾದ್ದು, ಇಲ್ಲ ಪೇಂಟ್‌ಗಳನ್ನು ಬಳಸುವುದಿಲ್ಲ. ಬದಲಿಗೆ ಚಾಕ್‌ಪೀಸ್‌ಗಳನ್ನು ಬಳಸುತ್ತಾರೆ. ಈ ಚಿತ್ರಗಳನ್ನು ರಸ್ತೆ ಮೇಲೆ ಬಿಡಿಸಲಾಗುತ್ತದೆ. ಇದರ ಬಲ ಅಥವಾ ಎಡ ಯಾವುದಾದರೂ ಒಂದು ಬದಿಯಿಂದ ನೋಡಿದಾಗ ಇದು ನಿಜವಾದ ಚಿತ್ರದಂತೆ ಕಾಣಿಸುತ್ತದೆ. ರಸ್ತೆಯಲ್ಲಿ ಹೊಂಡವಿರುವ ಹಾಗೆ, ರಸ್ತೆ ಮೇಲೆ ನದಿ, ಮೊಸಳೆ ಇರುವ ಹಾಗೆ ಬರೆಯುವುದು ಇವೆಲ್ಲ ಚಾಕ್ ಆರ್ಟ್.

ಬಸ್‌ನಲ್ಲಿ ಹೋಗುವಾಗ ಪ್ರತಿಬಾರಿ ಕಿಟಕಿಯ ಬಳಿಯೇ ಕೂರುತ್ತಿದ್ದೆ. ಗೋಡೆಗಳನ್ನು ನೋಡುತ್ತಿದ್ದೆ. ಬಣ್ಣಗಳು ಆಕರ್ಷಕವಾಗಿ ಕಂಡವು. ಅವನ್ನು ಯಾರು ಮಾಡಿದ್ದು? ಏನದರ ಅರ್ಥ ಇವೆಲ್ಲ ತಿಳಿಯುತ್ತಿರಲಿಲ್ಲ. ಖಾಲಿ ಗೋಡೆಗಿಂತ ಆ ಗೋಡೆಗಳೇ ನೋಡಲು ಸುಂದರ ಎನಿಸುತ್ತಿತ್ತು. ಒಂದು ಗ್ರಾಫಿಟಿ ಆರ್ಟ್‌ನ ಗೋಡೆ ಬಂದ ನಂತರ ಇನ್ನೊಂದು ಕಡೆ ಎಲ್ಲಿ ಬಣ್ಣ ಹಾಕಿರಬಹುದು ಎಂದು ಕುತೂಹಲದಿಂದ ನೋಡುತ್ತಿದ್ದೆ. ಬರುಬರುತ್ತಾ ಇದೇ ಅಭ್ಯಾಸವಾಯಿತು. ಹೀಗೆ ಮಾಡಿದ್ದರೆ ಇನ್ನೂ ಚೆಂದ ಕಾಣುತ್ತಿತ್ತು ಎಂದನಿಸಲು ಆರಂಭವಾಯಿತು. ನಾನೇ ಏಕೆ ಮಾಡಬಾರದು ಎಂದನಿಸಿತು. ಈ ನನ್ನ ಬಣ್ಣದಾಟಕ್ಕೆ ನಮ್ಮಮ್ಮ ಮನೆಯ ಗೋಡೆಯನ್ನೇ ನೀಡಿದರು. ಮನೆ ಗೋಡೆ ಮೇಲೆ ನನ್ನ ಮೊದಲ ಗ್ರಾಫಿಟಿ ಆರ್ಟ್. ಮನೆಗೆ ಬಂದು ಹೋಗುವವರೆಲ್ಲ ನಮ್ಮ ಮನೆಯ ಗೋಡೆ ಮೇಲೂ ಹೀಗೆ ಮಾಡುತ್ತೀಯಾ ಎನ್ನುತ್ತಿದ್ದಾರೆ. ಕಲೆಯಲ್ಲಿ ಅಗಾಧವಾದ ಖುಷಿ, ತೃಪ್ತಿ ಇದೆ.
-ವಿನಾಯಕ್, ಬೆಂಗಳೂರು, ಗ್ರಾಫಿಟಿ ಆರ್ಟಿಸ್ಟ್

ನಾನೊಬ್ಬ ಸಾಫ್ಟ್ ವೇರ್ ಇಂಜಿನಿಯರ್. ವೀಕೆಂಡ್‌ಗಳಿಗೆ ಕಾಯುವ ಚಾತಕ ಪಕ್ಷಿ. ಆದರೆ ಎಲ್ಲರಂತೆ ಪಬ್, ಸಿನಿಮಾದಲ್ಲಿ ನನ್ನ ವೀಕೆಂಡ್ ಮುಗಿಯುವುದಿಲ್ಲ. ಸ್ನೇಹಿತರ ಬಳಗ ಒಂದಿದೆ. ಎಲ್ಲರೂ ಕಲಾಪ್ರೇಮಿಗಳೇ. ವೀಕೆಂಡ್‌ನಲ್ಲಿ ಕೈಯಲ್ಲಿ ಬಣ್ಣ, ಬ್ರಷ್ ಹಿಡಿದು ಹೊರಡುತ್ತೇವೆ. ಕಪ್ಪು ಬಿಳುಪಿಗೆ, ಬಾಡಿ ಹೋದವುಗಳಿಗೆ ಬಣ್ಣ ನೀಡುತ್ತೇವೆ. ಗೋಡೆಗಳಿಗೂ ಖುಷಿ, ನಮಗೂ ಖುಷಿ.

-ಅನುಷಾ ಶೆಟ್ಟಿ, ಶಿವಮೊಗ್ಗ, ಕಲಾವಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss