Sunday, February 28, 2021

Latest Posts

ಅಂದು ಕುಡಿಯಲೂ ನೀರಿಲ್ಲದ ಊರಲ್ಲೀಗ ಜಲಲ ಜಲಲ ಜಲ ಧಾರೆ!

ದಿಗಂತ ವರದಿ, ಉಡುಪಿ
ಮಳೆಗಾಲದಲ್ಲಿ ಗುಡ್ಡದಿಂದ ಹರಿಯುವ ನೀರನ್ನು ತಡೆಯುವುದರಿಂದ, ಓಡುವ ನೀರನ್ನು ನಿಲ್ಲಿಸಿ ಇಂಗಿಸುವುದರಿಂದ ಏನೆಲ್ಲ ಪ್ರಯೋಜನ ವಾಗುತ್ತದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಎರಡು ವರ್ಷದ ಹಿಂದೆ ಕುಡಿಯಲೂ ನೀರಿ ಲ್ಲದೇ ಪರಿತಪಿಸುತ್ತಿದ್ದ ಪ್ರದೇಶದಲ್ಲೀಗ ನೀರು ಒರತೆಯಂತೆ ಹರಿಯುತ್ತಿದೆ!
ಹೌದು, ಈ ವಿಸ್ಮಯ ನಡೆದಿರುವುದು ಕುಂದಾಪುರ ತಾಲೂಕಿನ ಆರ್ಗೋಡು ಎಂಬಲ್ಲಿ. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಆಜ್ರಿ ಗ್ರಾ.ಪಂ. ವತಿಯಿಂದ ನಾಲ್ಕು ದಿನಗಳ ಹಿಂದೆ ಕೊಳವೆ ಬಾವಿ ಕೊರೆಯ ಲಾಗಿತ್ತು. ಈ ಕೊಳವೆ ಬಾವಿಯಲ್ಲಿ ಈ ಫೆಬ್ರವರಿ ತಿಂಗಳಲ್ಲಿಯೂ ನೀರು ತುಂಬಿ ತುಳುಕುತ್ತಿದೆ.

ಜಲ ಮಟ್ಟ ಏರಿಸಿದ ಇಂಗು ಗುಂಡಿ, ಒಡ್ಡು
ಸುಮ್ಮನೆ ಈ ರೀತಿಯಾಗಿ ಬೇಸಗೆಯಲ್ಲಿಯೂ ಕೊಳವೆ ಬಾವಿಯಿಂದ ನೀರು ಹೊರ ಚಿಮ್ಮುತ್ತಿಲ್ಲ. ಇದರ ಹಿಂದೆ ಸತತ ಐದು ವರ್ಷಗಳ ಪರಿಶ್ರಮವಿದೆ. ಕಮಲಶಿಲೆ ಗ್ರಾಮದ ಆರ್ಗೋಡು ಶ್ರೀಕಾಂತ್ ಶೆಣೈ ಅವರು ಕಳೆದ ಒಂದು ದಶಕದಿಂದ ನೀರಿಂಗಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸುಮಾರು10 ವರ್ಷದ ಹಿಂದೆ ೨೦೧೦ ಉದ್ದಗಲದ ಇಂಗು ಗುಂಡಿಯನ್ನು ನಿರ್ಮಿಸಿದ್ದ ಅವರು, ಐದು ವರ್ಷಗಳ ಹಿಂದೆ ಮಳೆಗಾಲದಲ್ಲಿ ಗುಡ್ಡದಿಂದ ಹರಿದು ಬರುವ ನೀರಿಗೆ ಒಡ್ಡು ನಿರ್ಮಿಸಿ ನೀರು ಇಂಗಿಸುತ್ತಿದ್ದರು. ಪರಿಣಾಮ ಶೆಣೈ ಅವರ ಜಮೀನಿನಲ್ಲಿದ್ದ ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಎರಡು ವರ್ಷದ ಹಿಂದೆ ಅವರ ಮನೆಯ ಸುತ್ತಮುತ್ತಲ ನಾಲ್ಕೈದು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದಾಗ ಅವರಿಗೆಲ್ಲ ಶೆಣೈ ಅವರೇ ನೀರೊದಗಿಸಿದ್ದರು.
ಇಳಿಜಾರಿನಲ್ಲಿ ಹತ್ತು ಸರಣಿ ಒಡ್ಡುಗಳು
ಗುಡ್ಡದಿಂದ ಹರಿದು ಬರುವ ನೀರಿಗೆ ಒಟ್ಟು 10 ಕಡೆಗಳಲ್ಲಿ ಸುಮಾರು ೧೫ ಅಡಿ ಉದ್ದದ ೫-೩ ಅಡಿ ಎತ್ತರದ ಸರಣಿ ಒಡ್ಡುಗಳನ್ನು ಶ್ರೀಕಾಂತ್ ಶೆಣೈ ನಿರ್ಮಿಸಿದ್ದರು. ಇದರಿಂದ ಗುಡ್ಡ ಪ್ರದೇಶದಿಂದ ಇಳಿಜಾರಿನಲ್ಲಿ ವೇಗವಾಗಿ ಹರಿಯುವ ನೀರು ತಡೆದು ನಿಂತು, ಒಡ್ಡು ತುಂಬಿ ಇನ್ನೊಂದಕ್ಕೆ ಹರಿದು ಸಾಗುತ್ತಿತ್ತು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಭೂಮಿಗೆ ಇಂಗುತ್ತಿತ್ತು. ಶೆಣೈ ಅವರಿಗೆ ಇದರ ಪರಿಣಾಮ ಮೊದಲೇ ಅನುಭವಕ್ಕೆ ಬಂದಿದ್ದರೂ ನಾಲ್ಕು ದಿನದ ಹಿಂದೆ ಅವರ ಮನೆ ಸಮೀಪ ಕೊರೆದ ಕೊಳವೆ ಬಾವಿಯಲ್ಲಿ ನೀರು ಉಕ್ಕೇರಿ ಹರಿಯುತ್ತಿರುವುದನ್ನು ಕಂಡು ಖುಷಿ ಇಮ್ಮಡಿಯಾಗಿದೆ.
ಕೊಳವೆ ಬಾವಿ ಕೊರೆಯುವಾಗ ಆಗಸದೆತ್ತರಕ್ಕೆ ನೀರು ಚಿಮ್ಮಿತ್ತು. ಕೊರೆದವರು ರಾತ್ರಿ ಕೊಳವೆ ಬಾವಿ ಕೊರೆದು, ಅದಕ್ಕೆ ಮುಚ್ಚಳ ಮುಚ್ಚಿ4  ಇಂಚು ನೀರಿದೆ ಎಂದು ಹೇಳಿದ್ದರು. ಆದರೆ ಮರುದಿನ ಪಕ್ಕದಲ್ಲಿರುವ ಮನೆಯ ಶ್ರೀಕಾಂತ್ ಶೆಣೈ ಅವರು ಕೊಳವೆ ಬಾವಿಯ ಬಳಿ ಹೋಗಿ ನೋಡಿದಾಗ ಅದರಿಂದ ನೀರು ಉಕ್ಕಿ ಹೊರಗೆ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಭೂಗರ್ಭದಿಂದ ಚಿಮ್ಮುತ್ತಿರುವ ಗಂಗೆಗೆ ಪೂಜೆಯನ್ನೂ ನೆರವೇರಿಸಲಾಗಿದೆ.
ಅಂದಹಾಗೆ ಗ್ರಾಮ ಪಂಚಾಯತ್‌ನಿಂದ ಕೊರೆದ ಈ ಕೊಳವೆ ಬಾವಿ ೫೦೦ ಅಡಿ ಆಳವಿದೆ. ಇನ್ನು ಮುಂದೆ ಆರ್ಗೋಡು ಪರಿಸರದ 35 ಕ್ಕೂ ಅಧಿಕ ಮನೆಗಳ ದಾಹ ನೀಗಿಸಲಿದೆ.
ಕಳೆದ ವರ್ಷ ಗುರುತಿಸಿದ ಜಲ ಬಿಂದು!
ನಾವು 12 ವರ್ಷಗಳ ಹಿಂದೆ ‘ಜಲಭಾರತಿ’ಯೊಂದಿಗೆ ಜಲ ಸಂಬಂಧಿ ಕೆಲಸಗಳನ್ನು ಮಾಡುತ್ತಿದ್ದೆವು. ನಂತರ ನಮ್ಮದೇ ಜಮೀನಿನಲ್ಲಿ ಇಂಗು ಗುಂಡಿ ನಿರ್ಮಿಸಿದ್ದೆವು. ಐದು ವರ್ಷಗಳ ಹಿಂದೆ ಸರಣಿ ಒಡ್ಡು ಗಳನ್ನು ಕಟ್ಟಿದ್ದರಿಂದ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿದೆ. ಪಂ. ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಯಲು ಕಳೆದ ವರ್ಷ ಪಾಯಿಂಟ್ ನೋಡಿತ್ತು, ಆದರೆ ಕೊರೆಯಲಾಗಿರಲಿಲ್ಲ. ಈ ವರ್ಷ ಬೋರ್ ಕೊರೆಸಿದ್ದು, ಕಳೆದ ನಾಲ್ಕು ದಿನಗಳಿಂದಲೂ ನೀರು ಉಕ್ಕಿ ಹರಿಯುತ್ತಿದೆ. ಇದನ್ನು ನೋಡಿ ತುಂಬಾ ಖುಷಿಯಾಗಿದೆ.
ಶ್ರೀಕಾಂತ್ ಶೆಣೈ ಆರ್ಗೋಡು, ಸರಣಿ ಒಡ್ಡುಗಳ ನಿರ್ಮಾತೃ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!