ಉಡುಪಿ: ಉತ್ತರ ಕನ್ನಡ ಜಿಲ್ಲೆಯ 103 ವರ್ಷದ ಹುಸೇನಾಬಿ ಬುಡೆನ್ಸಾಬ್ ಸಿದ್ಧಿ, ಉಡುಪಿಯ ಭೂತಕೋಲ ಕಲಾವಿದ ಸಾಧು ಪಾಣಾರ, ದಕ್ಷಿಣ ಕನ್ನಡ ಜಿಲ್ಲೆ ಸಿದ್ಧವೇಷ ಕಲಾವಿದ ರುಕ್ಮಯ್ಯ ಗೌಡ ಸಹಿತ ರಾಜ್ಯದ 30 ಕಲಾವಿದರು ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಾನಪದ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಕಲಾವಿದರು ಮತ್ತು ತಜ್ಞರಿಗೆ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಯ ಪಟ್ಟಿಯನ್ನು ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರು ಬುಧವಾರ ಉಡುಪಿಯಲ್ಲಿ ಘೋಷಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳ 30 ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಗೌರವ ಪ್ರಶಸ್ತಿಯು 25 ಸಾವಿರ ರೂ.ಗಳ ಮೊತ್ತ ಮತ್ತು ಕ್ಷೇತ್ರ ತಜ್ಞರಿಗೆ 50 ಸಾವಿರ ರೂ. ಪ್ರಶಸ್ತಿ ಮೊತ್ತ ಒಳಗೊಂಡಿದೆ ಎಂದು ಮಂಜಮ್ಮ ಜೋಗತಿ ಮಾಹಿತಿ ನೀಡಿದರು.
ಜಾನಪದ ತಜ್ಞ ಪ್ರಶಸ್ತಿಗಳಲ್ಲಿ ಡಾ. ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿಗೆ ರಾಮನಗರದ ಡಾ.ಚಕ್ಕೆರೆ ಶಿವಶಂಕರ್ ಹಾಗೂ ಡಾ. ಬಿ.ಎಸ್.ಗದ್ದಗಿಮಠ ತಜ್ಞ ಪ್ರಶಸ್ತಿಗೆ ಕಲಬುರಗಿಯ ಬಸವರಾಜ ಪೊಲೀಸ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ: ಏಪ್ರಿಲ್ ಅಥವಾ ಮೇ ನಲ್ಲಿ ಬಳ್ಳಾರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.