Monday, August 8, 2022

Latest Posts

ಅಕಾಲಿಕ ಮಳೆಗೆ ಕಡಲೆ ಬೆಳೆ ಹಾನಿ: ಕಂದಾಯ ಸಚಿವರ ಭೇಟಿ, ಸಮೀಕ್ಷೆಗೆ ಸೂಚನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆ ಪ್ರದೇಶಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಬಬ್ಬೂರು ಹಾಗೂ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆಯನ್ನು ಸಚಿವರು ವೀಕ್ಷಿಸಿ ರೈತರ ಸಂಕಷ್ಟ ಆಲಿಸಿದರು.

ಪರಿಶೀಲನೆ
ರಾಜ್ಯದಲ್ಲಿ ಅಕಾಲಿಕವಾಗಿ ಬಿದ್ದ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆ ಹಾನಿಗೀಡಾಗಿದೆ. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬೆಳೆ ನಷ್ಟ ಅನುಭವಿಸಿದ ನೊಂದ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಜಿಲ್ಲೆಗೆ ಭೇಟಿ ನೀಡಲಾಗಿದೆ ಎಂದು ಹೇಳಿದರು.

ಮಳೆಯಿಂದ ಕಡಲೆ ಬೆಳೆ ಸಂಪೂರ್ಣ ನಾಶ 
ಜಿಲ್ಲೆಯಲ್ಲಿ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಡಲೆ ಬೆಳೆ ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿದೆ. ಇದರ ಜೊತೆಗೆ ಈರುಳ್ಳಿ ಬೆಳೆಯು ಸಹ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿದೆ. ಚಿತ್ರದುರ್ಗ, ಹಾವೇರಿ, ಧಾರವಾಡ, ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಹಾಗಾಗಿ ರೈತರಿಗೆ ಪರಿಹಾರವನ್ನು ಕೊಡಿಸುವ ದೃಷ್ಠಿಯಿಂದ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ಕ್ರಮಕೈಗೊಳ್ಳಲಾಗುವುದು
ಅಕಾಲಿಕ ಮಳೆಯಿಂದಾಗಿ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದ ಅಂಕಿ-ಅಂಶಗಳೊಂದಿಗೆ ಮಾಹಿತಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಹಾನಿಗೀಡಾದ ಕಡಲೆ ಕಾಳು ಬೆಳೆಗೆ ಸೂಕ್ತ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಕೆ.ಪೂರ್ಣಿಮಾ, ಜಿ.ಪಂ. ಅಧ್ಯಕ್ಷತೆ ಶಶಿಕಲಾ ಸುರೇಶ್‌ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ಉಪನಿರ್ದೇಶಕರಾದ ಪ್ರಭಾಕರ್, ಹುಲಿರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸವಿತಾ, ಹಿರಿಯೂರು ತಾಲ್ಲೂಕು ತಹಶೀಲ್ದಾರ್ ಸತ್ಯನಾರಾಯಣ, ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss