ಹೊಸ ದಿಗಂತ ವರದಿ, ಹಾವೇರಿ:
ಅಕಾಲಿಕ ಮಳೆಯಿಂದಾಗಿ ಚನ್ನಾಗಿ ಬೆಳೆದಿದ್ದ ಬಿಳಿ ಜೋಳದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ ಹಿನ್ನಲೆಯಲ್ಲಿ ರೈತರ ಹಾಗೂ ಜಾನುವಾರುಗಲ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಇದೇ ಜ.8 ಹಾಗೂ 9ರಂದು ಸುರಿದ ಅಕಾಲಿಕ ಮಳೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬಿಳಿಜೋಳದ ಫಸಲು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬಿಳಿಜೋಳ ನೆಲ ಕಚ್ಚಿದೆ ಇನ್ನು ಕಚ್ಚುತ್ತಿದೆ.
ಬಿಳಿಜೋಳ ಬೆಳೆ ಹವಾಮಾನ ಆಧಾರಿತ ಬೆಳೆ. ಈ ಬೆಳೆಯು ಛಳಿಗಾಲದಲ್ಲಿ ಬೆಳೆಯುವಂತಹುದು. ಈ ಬೆಳೆಗೆ ಭೂಮಿ ತಂಪಾಗಿದ್ದರೆ ಹುಲುಸಾಗಿ ಬರುತ್ತದೆ. ಒಂದು ವೇಳೆ ಭೂಮಿಯಲ್ಲಿ ಅಷ್ಟಕ್ಕಷ್ಟೆ ತಂಪಿದ್ದರು ಛಳಿಗಾಲದಲ್ಲಿ ವಾತಾವರಣದಲ್ಲಿ ತಂಪು ಹಾಗೂ ತೇವಾಂಶವಿದ್ದರೆ ಸಾಕು ಉತ್ತಮ ಬೆಳೆಯನ್ನು ಪಡೆಯಬಹುದು. ಆದರೆ ಈ ಅಕಾಲಿಕ ಮಳೆಯಿಂದ ಬಿಳಿಜೋಳದ ಬೇರುಗಳು ಸಡಿಲಾಗಿ ಬೆಳೆ ನಲಕಚ್ಚುತ್ತಿದೆ.
ಕಳೆದ ವರ್ಷವೂ ಸಹ ಡಿಸೆಂಬರರ ತಿಂಗಳಲ್ಲಿ ತುಂತುರು ಅಕಾಳಿಕ ಮಳೆ ಆಗಿತ್ತು. ಆ ಮಳೆಯಿಂದ ಬಿಳಿಜೋಳ ಬೆಳೆ ಅಷ್ಟಾಗಿ ಹಾನಿಯಾಗಿರಲಿಲ್ಲ. ಆದರೆ ಬಿಳಿಜೋಳ ನೋಡುವುದಕ್ಕೆ ಬಹಳ ಬೆಳ್ಳಗಿದ್ದರೂ ಸಹ ರೊಟ್ಟಿ ಮಾಡಿದರೆ ಕೆಲವರ ರೊಟ್ಟಿ ಕೆಂಪಗಾದರೆ ಇನ್ನು ಕೆಲವರ ರೊಟ್ಟಿ ಕಂದು ಬಣ್ಣದ್ದಾಗಿದ್ದವು. ಆದರೆ ಈ ವರ್ಷ ಕಲಾಲಿಕ ಮಳೆ ಭರಪೂರ ಆಗಿದ್ದರಿಂದ ಈ ವರ್ಷದ ಬಿಳಿಜೋಳದ ರೊಟ್ಟು ಪೂರ್ಣ ಪ್ರಮಾಣದಲ್ಲಿ ಕಪ್ಪಾಗುವ ಸಾಧ್ಯತೆ ಹೆಚ್ಚೆನ್ನುತ್ತಾರೆ ರೈತರು ಹಾಗೂ ವ್ಯಾಪಾರಸ್ತರು.
ಜೋಳದ ದಂಟು ನೆಲಕ್ಕೆ ಬಿದ್ದಿರುವುದರಿಂದ ತೆನೆಯಲ್ಲಿ ಕಾಳು ಗಟ್ಟಿದರೂ ಸಹ ಗುಬ್ಬಿಗಳ ಕಾಟ ಹೆಚ್ಚಾಗಿ ಇಳುವರಿ ಬಹಳ ಕಡಿಮೆ ಬರುವ ಸಾಧ್ಯತೆ ಇದೆ. ಇದಲ್ಲದೆ ಬಿಳಿಜೋಳದ ದಂಟು ಕಪ್ಪಾಗಿ ಜಾನುವಾರುಗಳಿಗೂ ಸಹ ಇದು ಆಹಾರಕ್ಕೆ ಯೋಗ್ಯವಾಗುವು ಸಾಧ್ಯತೆ ಕಡಿಮೆ ಎನ್ನುತ್ತಾರೆ ರೈತಾಪಿ ವರ್ಗ.
ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ರೈತ ಧರ್ಮಣ್ಣ ಕೋಟ್ರಪ್ಪ ಯತ್ತಿನಹಳ್ಳಿ ತಮ್ಮ ನಾಲ್ಕುವರೆ ಎಕರೆ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದರು. ಚನ್ನಾಗಿ ಬೆಳೆದಿದ್ದ ಬೆಳೆ ಸುರಿದ ಅಕಾಲಿಕ ಮಳೆ ಗಾಳಿಗೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಧರ್ಮಣ್ಣ ಯತ್ತಿನಹಳ್ಳಿ ಬೇಸರವ್ಯಕ್ತಪಡಿಸಿದರು.
ಗ್ರಾಮದ ಇನ್ನೂರ್ವ ರೈತ ಭೀಮೇಶಪ್ಪ ಗೊಲ್ಲರಗೆ ಸೇರಿದ ಮೂರು ಎಕರೆ ಬಿಳಿ ಜೋಳ ಬೆಳೆ ನೆಲದ ಪಾಲಾಗಿದೆ.