ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಕ್ಕನ ಜೊತೆ ಪದೇ ಪದೇ ಜಗಳ ಮಾಡುತ್ತಾನೆಂದು ಸ್ವಂತ ಬಾವನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬಾಮೈದನೇ ಹತ್ಯೆ ಮಾಡಿರುವ ದುರ್ಘಟನೆ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ನಡೆದಿದೆ.
ಅಜೀಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಖಾದರ್ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ.
ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತಿದ್ದ ಅಜೀಮ್ ಉಲ್ಲಾ ಹಲವು ವರ್ಷಗಳ ಹಿಂದೆ ಖಾದರ್ ನ ಅಕ್ಕನನ್ನು ಮದುವೆಯಾಗಿದ್ದ. ಅಜಿಮ್ ದಂಪತಿ ಬೆಂಗಳೂರಿನ ನಂದಿನಿ ಬಡಾವಣೆಯ ಕಂಠೀರವ ನಗರದಲ್ಲಿ ವಾಸವಾಗಿದ್ದರು.
ಅಜಿಮ್ ತನ್ನ ಪತ್ನಿ ಜೊತೆ ಆಗಾಗ ಜಗಳವಾಡುತ್ತಿದ್ದು, ಭಾನುವಾರ ಕೂಡ ಜಗಳ ತೆಗೆದಿದ್ದಾನೆ. ಈ ವಿಷಯ ತಿಳಿದ ಖಾದರ್ ತಾನು ವಾಸವಿದ್ದ ಕೂಲಿ ನಗರದಿಂದ ತನ್ನ ಇಬ್ಬರು ಗೆಳೆಯರ ಜೊತೆ ಅಕ್ಕನ ಮನೆ ಬಳಿ ಬಂದಿದ್ದ. ಈ ವೇಳೆ ಬಾವ, ಬಾಮೈದನ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಆ ವೇಳೆ ರೊಚ್ಚಿಗೆದ್ದ ಖಾದರ್ ಬಾವನ ಮೇಲೆ ಹಲವು ಬಾರಿ ಕಲ್ಲಿನಿಂದ ಹಲ್ಲೆ ಮಾಡಿ ಹತ್ಯೆ ಗೈದು ಪರಾರಿಯಾಗಿದ್ದಾನೆ. ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.