Monday, July 4, 2022

Latest Posts

ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ತಡೆಗೆ ಗ್ರಾಮೀಣ ಟಾಸ್ಕ್‌ಪೋರ್ಸ್ : ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಹೊಸ ದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ತಡೆಯಲು ಗ್ರಾಮೀಣ ಟಾಸ್ಕ್‌ಪೋರ್ಸ್ ರಚಿಸಲಾಗುವುದು. ವಿಎ, ಪಿಡಿಒ, ಗ್ರಾಪಂ ಆಡಳಿತ ಈ ಕಾರ್ಯಪಡೆಯಲ್ಲಿ ಇರಲಿದ್ದಾರೆ. ಜತೆಗೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯನ್ನು ಸಕ್ರಮಗೊಳಿಸಲು ಅಭಿಯಾನ ನಡೆಸಲಾಗುವುದು. ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದಲ್ಲಿ ವಿಎ ಹಾಗೂ ಪಿಡಿಒಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ದ.ಕ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲು ಗಣಿ ಇಲಾಖೆಯಿಂದ ನೇರವಾಗಿ ಜಿಲ್ಲಾ ಟಾಸ್ಕ್‌ಪೋರ್ಸ್‌ಗೆ ಮಾಹಿತಿಯಿಲ್ಲದೆ ಅನುಮತಿ ನೀಡಲಾಗುತ್ತದೆ. ಇದನ್ನು ಬದಲಾಯಿಸುವಂತೆ ಈಗಾಗಲೇ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ತಿಳಿಸಲಾಗಿದೆ. ಸರಕಾರಿ ಭೂಮಿಯಲ್ಲಿ ಎಲ್ಲೂ ಗಣಿಗಾರಿಕೆ ನಡೆಸುವಂತಿಲ್ಲ. ಪಟ್ಟಾ ಜಾಗದಲ್ಲಿ ಅನುಮತಿ ಪಡೆದರೂ ಕೆಲವರು ಬೇರೆ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಳೇಪುಣಿ, ಪಜೀರು ಮುಂತಾದೆಡೆಯಿಂದ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಾಂತ್ರಿಕ ವರದಿ ಪಡೆಯಲಾಗಿದೆ. ನಿಗದಿತ ಸಮಯದೊಳಗೆ ಸಕ್ರಮಗೊಳಿಸದೆ ಗಣಿಗಾರಿಕೆ ಮುಂದುವರಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮರಳು ಯುನಿಟ್‌ಗೆ 7000 ರೂ.
ಜಿಲ್ಲೆಯಲ್ಲಿ ಈಗಾಗಲೇ 88 ಮಂದಿಗೆ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿ ನವೀಕರಣ ಮಾಡಲಾಗಿದೆ. ಸ್ಯಾಂಡ್ ಬಜಾರ್ ಆಪ್ ಮೂಲಕ 20 ಕಿ.ಮೀ ವ್ಯಾಪ್ತಿಯಲ್ಲಿ ಯುನಿಟ್‌ಗೆ 7000 ರೂ. ದರ ನಿಗದಿಪಡಿಸಲಾಗಿದೆ. ಅಕ್ರಮ ಮರಳುಗಾರಿಕೆ, ಸಾಗಾಟ ತಡೆಗಟ್ಟುವುದಕ್ಕೆ ದಕ್ಕೆಯಲ್ಲಿ ಲಾಂಗ್ ರೇಂಜ್ ಇರುವ ಹೈಪವರ್ ಕ್ಯಾಮರಾ ಅಳವಡಿಸಲಾಗುವುದು, ಪೊಲೀಸ್ ಜತೆ ಜಂಟಿ ಚೆಕ್‌ಪೋಸ್ಟ್ ರಚಿಸಲಾಗುವುದು ಎಂದರು.
ಪೊಲೀಸರು, ಗಣಿ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆ ಸರಿಯಾದ ಹೊಂದಾಣಿಕೆಯಿಲ್ಲದಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಮುಂದಿನ ವಾರ ಮೂರೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಡಿಸಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss