ಹೊಸದಿಗಂತ ವರದಿ,ಕೊಡಗು:
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬಂಧಿಸಿರುವ ವೀರಾಜಪೇಟೆ ಉಪ ವಿಭಾಗದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ವೀರಾಜಪೇಟೆ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳು ಆರೋಪಿಗಳಿಂದ 50 ಸಾವಿರ ರೂ.ಮೌಲ್ಯದ 1ಕೆ.ಜಿ 487 ಗ್ರಾಂ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಬೈಕ್ ಹಾಗೂ ಒಂದು ಸ್ಕೂಟರ್ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ವೀರಾಜಪೇಟೆ ಸೆಲ್ವನಗರದ ಎ.ಎಸ್.ಸಾದಿಕ್, ಸುಭಾಷ್ನಗರದ ಅಬ್ದುಲ್ ಜಮೀಲ್ (26),ಆರ್ಜಿ ಕಲ್ಲುಬಾಣೆ ನಿವಾಸಿ ಕೆ.ಇ.ಕಬೀರ್ (27), ಮೀನುಪೇಟೆಯ ಮೆಲ್ವಿನ್ ಅಂತೋಣಿ(22) ಹಾಗೂ ವಿಜಯನಗರದ ಎಂ.ಎ.ಇಮ್ರಾನ್ ಅಲಿಯಾಸ್ ಸೋನು(22) ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ 12.05 ಗಂಟೆ ಸುಮಾರಿಗೆ ವೀರಾಜಪೇಟೆ ನಗರ ಠಾಣೆ ಪಿಎಸ್ಐ ಜಗದೀಶ್ ಧೂಳಶೆಟ್ಟಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನ, ವೀರಾಜಪೇಟೆ ಉಪ ವಿಭಾಗದ ಡಿವೈಎಸ್.ಪಿ ಜಯಕುಮಾರ್ ನಿರ್ದೇಶನ, ವೀರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ
ಜಗದೀಶ್ ಧೂಳಶೆಟ್ಟಿ, ಅಪರಾಧ ವಿಭಾಗದ ಪಿ.ಎಸ್.ಐ ಭೋಜಪ್ಪ, ಅಪರಾಧ ಪತ್ತೆ ಸಿಬ್ಬಂದಿಗಳಾದ ಎಂ.ಎಸ್.ಸುಬ್ರಮಣಿ, ಪ್ರಾನ್ಸಿಸ್, ಸಿಬ್ಬಂದಿಗಳಾದ ಎಂ.ಡಿ.ಮನು, ಎ.ಪಿ.ವಿಶ್ವನಾಥ, ರಂಜಿತ್, ರಾಮಪ್ಪ, ಟಿ.ಎಸ್.ಗಿರೀಶ, ಚಂದ್ರಶೇಖರ, ಎನ್.ಎಸ್.ಲೋಕೇಶ್, ಚಾಲಕ ಪೂವಯ್ಯ ಮತ್ತು ಜಿಲ್ಲಾ ಪೊಲೀಸ್ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಭಾಗವಹಿಸಿದ್ದರು.