ಹೊಸದಿಗಂತ ವರದಿ, ಪುತ್ತೂರು:
ಕೆಮ್ಮಿಂಜೆ ಗ್ರಾಮಾದ ನೈತಾಡಿ ಭಗತ್ಸಿಂಗ್ ರಸ್ತೆಯಲ್ಲಿ ಕೇರಳ ನೋಂದಣಿ ಹಾಗೂ ಕರ್ನಾಟಕ ನೋಂದಣಿಯ ಎರಡು ಕಾರುಗಳಲ್ಲಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಮತ್ತು ಸಿಬಂದಿ ಕಾರು ಹಾಗೂ 6.360 ಕೆ.ಜಿ. ತೂಕದ ಗಾಂಜಾ ಮತ್ತಿತರ ಸೊತ್ತೊಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ವಶ ಪಡಿಸಿಕೊಂಡ ಗಾಂಜಾದ ಮೌಲ್ಯ ರೂ.1.25ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳಾದ ಕೇರಳದ ಮಂಜೇಶ್ವರ ತಾಲೂಕು ಪೈವಳಿಕೆ ನಿವಾಸಿ ಮಹಮ್ಮದ್ ಅರ್ಷದ್, ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ರಿಯಾಜ್, ಕಬಕ ಗ್ರಾಮ ನಿವಾಸಿ ಅಬ್ದುಲ್ ಖಾದರ್ ಜಾಬೀರ್, ಬನ್ನೂರು ನಿವಾಸಿ ಅಬ್ದುಲ್ ನಜೀರ್ ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಮಾದಕ ವಸ್ತು, 5 ಮೊಬೈಲ್ ಫೋನ್ಗಳು, 2 ಕಾರುಗಳು ಸೇರಿ ಒಟ್ಟು ರೂ.5ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೇರಳದ ಕಡೆಯಿಂದ ಬಂದ ಇಬ್ಬರು ಆರೋಪಿಗಳ ಜೊತೆಗೆ ಸ್ಥಳೀಯ ಇಬ್ಬರು ಆರೋಪಿಗಳು ಸೇರಿದ್ದರು. ಆರೋಪಿಗಳ ವಾಹನದಲ್ಲಿದ್ದ ಮಾರಕಾಯುಧಗಳನ್ನು ಕೂಡಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.