ಕೋಲ್ಕತಾ: ಪಶ್ಚಿಮ ಬಂಗಾಳ ಅಕ್ರಮ ಬಾಂಬ್ ತಯಾರಕರ ಸ್ವರ್ಗವಾಗುತ್ತಿದೆ ಎಂದು ರಾಜ್ಯಪಾಲ ಜಗದೀಪ್ ಧಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿಯುತ್ತಿದ್ದು, ರಾಜ್ಯ ಆಡಳಿತವು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು’ ಎಂದು ರಾಜ್ಯಪಾಲರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಆರು ಮಂದಿ ಹಾಗೂ ಕೇರಳದ ಎರ್ನಾಕುಲಂನಲ್ಲಿ ಮೂವರು ಅಲ್ ಖೈದಾ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
‘ಬಂಗಾಳ ಅಕ್ರಮ ಬಾಂಬ್ ತಯಾರಕರ ನೆಲೆಯಾಗುತ್ತಿದ್ದು, ಇದು ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ. ಆದರೆ ಅಧಿಕಾರದಲ್ಲಿರುವ ಸರ್ಕಾರ ಮಾತ್ರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದು, ವಿಪಕ್ಷಗಳ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ಹೊಂದಿರುವ ಸರ್ಕಾರ ಮತ್ತು ಪೊಲೀಸರು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಈ ಘಟನೆ ಸರ್ಕಾರ ಮತ್ತು ಪೊಲೀಸರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಡಿಜಿಪಿ ವಿರುದ್ಧವೂ ಕಿಡಿಕಾರಿರುವ ರಾಜ್ಯಪಾಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಡಿಜಿಪಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ನೈಜಾಂಶದಿಂದ ದೂರವಿರಲು ಸಾಧ್ಯವಿಲ್ಲ. ಇಂತಹ ನಡೆ ನಿಜಕ್ಕೂ ಅಸಮಾಧಾನಕಾರಿಯಾಗಿದೆ. ಆದರೆ ಸಾಮಾನ್ಯ ಪೊಲೀಸರು ಎಷ್ಟೇ ಕ್ಲಿಷ್ಟಕರ ಸಂದರ್ಭಗಳಲ್ಲೂ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.