ಹೊಸದಿಗಂತ ವರದಿ, ಕೊಡಗು:
ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ವಾಹನ ಸಹಿತ ಕಡಂಗ ಎಡಪಾಲ ಗ್ರಾಮದಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಾಗಿರುವ ಕಡಂಗ ಎಡಪಾಲ ಗ್ರಾಮದ ನಿವಾಸಿಗಳಾದ ಶಿಯಾಬುದ್ದೀನ್ (34) ಹಾಗೂ ಅಸ್ಲಾಂ (28) ಅವರುಗಳು ಹೆಮ್ಮಾಡು ಗ್ರಾಮದ ಕಾವೇರಿ ನದಿಯ ಪಾತ್ರದಿಂದ ಅಕ್ರಮವಾಗಿ ಮರಳು ತೆಗೆದು ಸರ್ಕಾರದ ಪರವಾನಗಿ ಹೊಂದದೆ ಮಾರಾಟ ಮಾಡಲು ಮಹೇಂದ್ರ ಪಿಕ್ ಅಪ್ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದರು.
ಬೊಳ್ಳುಮಾಡು ಜಂಕ್ಷನ್ ಬಳಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮರಳು ಸಹಿತ ವಾಹನ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ವೀರಾಜಪೇಟೆ ಉಪವಿಭಾಗದ ಉಪ ಅಧೀಕ್ಷಕ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ದಲಿಂಗ ಬಿ. ಬಾಣಸೆ, ಎ.ಎಸ್.ಐ. ಶ್ರೀಧರ್, ಸಿಬ್ಬಂದಿಗಳಾದ ನೆಹರು ಕುಮಾರ್, ತೀರ್ಥ ಕುಮಾರ್, ಚಂದ್ರಶೇಖರ್, ಎಂ.ರಮೇಶ್ ಹಾಗೂ ಪ್ರದೀಪ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.