ರಾಮನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಎಚ್.ಎಸ್.ಯೋಗಾನಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.
ನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಸರಳವಾಗಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಎಚ್.ಎಸ್.ಯೋಗಾನಂದ ಮಾತನಾಡಿದರು. ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾಪಕರಾಗಿ ಕಟ್ಟಿದ ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಂತ ಹೆಮ್ಮರವಾಗಿ ವಿಸ್ತರಣೆ ಆಗುತ್ತಿದೆ. ನನ್ನ ಮೇಲೆ ವಿಶ್ವಾಸವಿರಿಸಿ, ಜಿಲ್ಲೆಯ ಜವಾಬ್ದಾರಿ ನೀಡಿರುವುದನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ವಚನ ಸಾಹಿತ್ಯದ ಆಶಯ, ಸಾಮಾಜಿಕ ಕಲ್ಪನೆ, ನೈತಿಕ ಮೌಲ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ನಾಲ್ಕು ತಾಲ್ಲೂಕುಗಳಲ್ಲಿ ಮಾಡುತ್ತೇನೆ ಎಂದು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಜರಗನಹಳ್ಳಿ ಶಿವಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಚನ ಮತ್ತು ಶರಣ ಸಾಹಿತ್ಯಗಳನ್ನು ಸಮಾಜಕ್ಕೆ ಮುಟ್ಟಿಸುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಜಾತ್ಯಾತೀತವಾಗಿ ೧೫ ಸಾವಿರಕ್ಕೂ ಹೆಚ್ಚು ಜನರು ಸದಸ್ಯರಾಗಿದ್ದು, ವೈಚಾರಿಕ ಸಿದ್ದಾಂತವನ್ನು ಕುರಿತು ಅನ್ಯಧರ್ಮಗಳೊಡನೆ ಎಲ್ಲರೂ ಒಟ್ಟಾಗಿ ನಡೆಸುವ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುವುದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದರು.
ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಸಾಹಿತ್ಯ ರಚನೆ ಮಾಡುವಾಗ ವಸ್ತುಸ್ಥಿತಿ ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ಕೃಷಿ ಆಗಲಿದೆ. ಅದರಂತೆ ಜರ್ಮನ್ ವಿಶ್ವವಿದ್ಯಾಲಯಯದ ಅಧ್ಯಯನದ ಪ್ರಕಾರ ಕನ್ನಡ ಭಾಷೆ ಮುಂದಿನ ಒಂದು ಸಾವಿರ ವರ್ಷಗಳ ಕಾಲ ಉಳಿಯಬಹುದಾದ ಭಾಷೆಯಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ವಚನ ಸಾಹಿತ್ಯವೇ ಪ್ರಮುಖ ಕಾರಣ ಎಂದ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವದ ಬಗ್ಗೆ ತಿಳಿಸಿದರು.
ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯಸ್ವಾಮಿ ಮಾತನಾಡಿ ದಾರ್ಶನಿಕ ಚಿಂತನೆಗಳಿoದ ಕೂಡಿದ ಈ ಸಾಹಿತ್ಯ ಪರಿಷತ್ತನ್ನು ವಿಶ್ವವ್ಯಾಪ್ತಿಯಾಗಿ ಬೆಳೆಸುವ ಸಂಕಲ್ಪವನ್ನು ಸಂಘಟಕರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರು ಸಹಕಾರ ನೀಡಿ ಜಿಲ್ಲಾ ಮತ್ತು ರಾಜ್ಯ ಘಟಕಗಳ ಸಂಘಟಕರು ತತ್ವ ಮತ್ತು ಆಚರಣೆಗಳನ್ನು ಉಳಿಸುವ ಮುಖೇನ ಸಮೂಹ ಮಾಧ್ಯಮಗಳ ಮೂಲಕ ಶರಣ ಸಾಹಿತ್ಯವನ್ನು ಪ್ರಸಾರ ಮಾಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಕ್ರಭಾವಿ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಗುರುವಿನಪುರದ ಶ್ರೀ ಜಗದೀಶ್ವರ ಶಿವಾಚಾರ್ಯಸ್ವಾಮಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿರ ಎಸ್.ಬಿ.ಅಂಗಡಿ, ಚನ್ನಪಟ್ಟಣ ತಾಲೂಕು ಅಧ್ಯಕ್ಷೆ ಶಾರದ ನಾಗೇಶ್ ಇದ್ದರು.
ವೀರಶೈವ ಮುಖಂಡರಾದ ಕೇತೋಹಳ್ಳಿ ಶಂಕರಪ್ಪ, ವೀರಶೈವ ಯುವಕರ ಸಂಘದ ಅಧ್ಯಕ್ಷ ಮಾದಪುರ ಕುಮಾರ್, ಲಕ್ಕೇನದೊಡ್ಡಿ ಗುರುಲಿಂಗಯ್ಯ, ಕರುನಾಡ ಸೇನೆ ಜಗದೀಶ್, ಕೂನಮುದ್ದೀನಹಳ್ಳಿ ರುದ್ರೇಶ್, ಪಿ.ಶಿವನಾಂದ್ ಮುಂತಾದವರು ಇದ್ದರು.