ಹೊಸದಿಲ್ಲಿ: ಅಗತ್ಯ ಸರಕುಗಳ ಕಾನೂನು ತಿದ್ದುಪಡಿ ಮಸೂದೆ 2020 ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಈರುಳ್ಳಿ, ಆಲೂಗಡ್ಡೆ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನ ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಲೋಕಸಭೆಯಲ್ಲಿ ಸೆಪ್ಟೆಂಬರ್ 15ರಂದು ಅಂಗೀಕಾರಗೊಂಡಿದ್ದ ಈ ಮಸೂದೆಯನ್ನ ಧ್ವನಿಮತದ ಮೂಲಕ ಇಂದು ಅಂಗೀಕರಿಸಲಾಗಿದೆ.
ಖಾಸಗಿ ಹೂಡಿಕೆದಾರರು ವ್ಯವಹಾರದಲ್ಲಿ ಅತಿಯಾದ ಹಸ್ತಕ್ಷೇಪ ಭಯ ತೆಗೆದು ಹಾಕುವ ಉದ್ದೇಶದಿಂದ ಈ ಮಸೂದೆ ಜಾರಿಗೊಳಿಸಲಾಗಿದೆ.
ಇದರಿಂದ ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಇದೀಗ ಈ ಮಸೂದೆಯಲ್ಲಿ ತಿದ್ದುಪಡಿಯಾಗಿದ್ದು, ಈರುಳ್ಳಿ, ಆಲೂಗಡ್ಡೆ, ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಖಾದ್ಯ ತೈಲಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಇಷ್ಟುದಿನ ವ್ಯಾಪಾರಿಗಳು ಸಂಗ್ರಹಿಸಬಹುದಾದ ಪ್ರಮಾಣದ ಮಿತಿ ಮೇಲೆ ನಿಯಂತ್ರಣ ಹೇರಿಕೆ ಮಾಡಬಹುದಿತ್ತು. ಆದರೆ ಇದೀಗ ಸರಕುಗಳು ಉತ್ಪಾದನೆ ಮಾಡಲು, ಹಿಡಿದಿಡಲು, ವಿತರಿಸಲು ಮತ್ತು ಪೂರೈಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ.