ಅಗತ್ಯ ವಸ್ತು ಕಾಯ್ದೆಗೆ ಐತಿಹಾಸಿಕ ತಿದ್ದುಪಡಿ: ದೇಶವೀಗ ಆಹಾರ ಉತ್ಪನ್ನ ಕೊರತೆ ಮುಕ್ತ, ರೈತರಿಗೆ ಉತ್ಪನ್ನ ಮಾರಾಟ ಮಾಡಲು ಈಗ ಮುಕ್ತ ಸ್ವಾತಂತ್ರ್ಯ

0
187

ಹೊಸದಿಲ್ಲಿ :ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಕಾಯ್ದೆಗೆ ಐತಿಹಾಸಿಕ ತಿದ್ದುಪಡಿಯನ್ನು ಬುಧವಾರ ಪ್ರಕಟಿಸಿದ್ದು, ಇದು ದೇಶದ ರೈತರಿಗೆ ಅವರ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ವಿಕ್ರಯಿಸುವಲ್ಲಿ ನೆರವಾಗಲಿದ್ದು, ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸಲಿದೆ ಎಂದು ನಂಬಲಾಗಿದೆ.ಇದರಂತೆ, ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬೇಳೆಕಾಳು , ಧವಸ ಧಾನ್ಯಗಳು, ಎಣ್ಣೆ, ಈರುಳ್ಳಿ, ಆಲೂಗಡ್ಡೆ ಯನ್ನು ಅಗತ್ಯ ವಸ್ತು ಕಾಯ್ದೆ ಪಟ್ಟಿಯಿಂದ ತೆಗೆದು ಹಾಕಿದೆ.
ಈ ಕ್ರಮ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯವಾಗಿದ್ದು, ಇನ್ನು ಮುಂದೆ ರೈತ ನೇರವಾಗಿ ತನ್ನ ಬೆಳೆಗಳನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡಬಹುದು.ಖಾಸಗಿ ಮಧ್ಯವರ್ತಿಗಳ ಭಯವಿಲ್ಲದೆ ಎಷ್ಟು ಬೇಕಾದರೂ ಉತ್ಪಾದನೆ , ಸಂಗ್ರಹ, ಮತ್ತು ಸಾಗಾಣಿಕೆ ಮಾಡುವ ಅವಕಾಶವನ್ನು ನೇರ ರೈತನೇ ಹೊಂದಿರುತ್ತಾನೆ . ರೈತ ತನ್ನ ಬೆಳೆಗಳನ್ನು ತನ್ನ ರಾಜ್ಯದೊಳಗೆ ಮತ್ತು ಇತರೆ ರಾಜ್ಯಕ್ಕೆ ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಜೊತೆಗೆ ಕೃಷಿ ಕ್ಷೇತ್ರಕ್ಕೆ ನೇರವಾಗಿ ಖಾಸಗಿ ಮತ್ತು ವಿದೇಶಿ ಹೂಡಿಕೆ ಮಾಡುವ ಅವಕಾಶ ಇರುತ್ತದೆ.ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರೈತನ ಬೆಳೆ ನೇರವಾಗಿ ಹೋಗಲು ಅವಕಾಶವಿರುತ್ತದೆ.ಶೀಥಲೀಕರಣ ಘಟಕಗಳಿಗೆ ಹೆಚ್ಚಿನ ಬೇಡಿಕೆ ಬರಲಿದ್ದು ಉದ್ಯೋಗವಕಾಶ ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ , ಕೊರೋನಾ ಬಿಕ್ಕಟ್ಟು ನಡುವೆಯೇ, ವಾರದಲ್ಲಿ ಎರಡನೇ ಬಾರಿ ಆರ್ಥಿಕತೆಗೆ ಚೈತನ್ಯ ನೀಡುವ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಕೈಗೊಂಡಿದೆ.ಈ ಬಗ್ಗೆ ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವ್ಡೇಕರ್ , ಕೃಷಿ ಸಚಿವ ನರೇಂದ್ರ ತೋಮಾರ್ ಅವರು ಕೃಷಿ ಕ್ಷೇತ್ರ ಮತ್ತು ರೈತರಿಗೆ ಲಾಭದಾಯಕವಾಗಲಿರುವ ನಿರ್ಧಾರಗಳ ಬಗ್ಗೆ ವಿವರ ನೀಡಿದರು.
ಈ ಕುರಿತ ವಿವರ ಇಂತಿದೆ
ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ.ಇದನ್ನು ಈ ಹಿಂದೆ ಕೊರತೆಗಳ ಸಂದರ್ಭ ತಂದುದಾಗಿದ್ದು, ಈಗ ಇಂತಹ ಯಾವುದೇ ಕೊರತೆ ಇಲ್ಲದಿರುವ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಮುಕ್ತ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ :ಜಾವ್ಡೇಕರ್
ಈ ಕಾಯ್ದೆ ಹೂಡಿಕೆಗೆ ತೊಡಕಾಗಿ ಪರಿಣಮಿಸಿತ್ತು. ಈಗ ಈ ತೂಗುಕತ್ತಿ ಅಂತ್ಯಗೊಂಡಿದ್ದು, ಇದು ರೈತರ ೫೦ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಈಡೇರಿದಂತಾಗಿದೆ.
ಇದೀಗ ರೈತರು ತಮ್ಮ ಉತ್ಪನ್ನಗಳನ್ನು ಪರಸ್ಪರ ಒಪ್ಪಿಗೆಯ ಆಧಾರದಲ್ಲಿ ಹೆಚ್ಚಿನ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಕೇಂದ್ರ ಅವಕಾಶ ನೀಡಿದೆ.ಇದು ದೇಶದಲ್ಲಿ ಪೂರೈಕೆ ಸರಪಣಿಯನ್ನು ಬಲಗೊಳಿಸಲಿದ್ದು, ಭಾರತ ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲ ಬಾರಿಗೆ ಇಂತಹ ನಿರ್ಧಾರವೊಂದನ್ನು ಕೈಗೊಂಡಿದೆ.
ಭಾರತವೀಗ ಬಹುತೇಕ ಕೃಷಿ ಉತ್ಪನ್ನಗಳಲ್ಲಿ ಮಿಗತೆ ಸಾಧಿಸಿದ್ದು, ರೈತರು ಶೈತ್ಯಾಗಾರ , ಸಂಸ್ಕರಣೆ ಮತ್ತು ರಫ್ತು ಅವಕಾಶಗಳ ಕೊರತೆಯಿಂದಾಗಿ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಅಸಮರ್ಥರಾಗಿದ್ದರು. ಕೃಷಿ ಕ್ಷೇತ್ರದಲ್ಲಿ ಯಾವುದೇ ಉದ್ಯಮಾಸಕ್ತಿಗೆ ಈ ಕಾಯ್ದೆ ತೊಡಕಾಗಿ ಕಾಡುತ್ತಿತ್ತು.
ಇದೀಗ ಧಾನ್ಯ, ಖಾದ್ಯ ತೈಲ, ಈರುಳ್ಳಿ, ಬಟಾಟೆಯಂತಹ ಉತ್ಪನ್ನಗಳನ್ನು ಅಗತ್ಯ ವಸ್ತು ಕಾಯ್ದೆಯಿಂದ ಕೈಬಿಡಲಾಗಿದೆ. ಇದರಿಂದ ಇವುಗಳ ಉತ್ಪಾದಕ ರೈತರು ಖಾಸಗಿ ಹೂಡಿಕೆದಾರರನ್ನು ಹೊಂದುವಲ್ಲಿ ಕಾನೂನಿನ ತೊಡಕಿನ ಆತಂಕದಿಂದ ಮುಕ್ತರಾದಂತಾಗಿದೆ.
ಹಾಗೆಯೇ ಕೇಂದ್ರ ಸಂಪುಟ ಕೈಗೊಂಡ ಇನ್ನೊಂದು ಮಹತ್ವದ ಕ್ರಮದಲ್ಲಿ, ಭಾರತದಲ್ಲಿ ಹೂಡಿಕೆ ಆಕರ್ಷಿಸುವುದಕ್ಕಾಗಿ ಸಚಿವಾಲಯ/ಇಲಾಖೆಗಳಲ್ಲಿ ಅಧಿಕಾರಯುಕ್ತ ಕಾರ್ಯದರ್ಶಿಗಳ ಗುಂಪು(ಇಜಿಒಎಸ್)ಮತ್ತು ಯೋಜನಾ ಅಭಿವೃದ್ಧಿ ಸೆಲ್‌ಗಳ(ಪಿಡಿಸಿ)ನ್ನು ರಚಿಸಲು ಸರಕಾರ ಅನುಮತಿ ನೀಡಿದೆ.
ಉತ್ಪಾದನೆ, ಸಂಗ್ರಹ, ಸಾಗಣೆ, ವಿತರಣೆ ಮತ್ತು ಪೂರೈಕೆಯ ಸ್ವಾತಂತ್ರ್ಯವು ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದ್ದು, ಇದು ಕೃಷಿ ಕ್ಷೇತ್ರದಲ್ಲೂ ಹೂಡಿಕೆಯನ್ನು ಆಕರ್ಷಿಸಲಿದೆ.
ಆದರೆ ಈ ತಿದ್ದುಪಡಿಯು ಯುದ್ಧ, ಕ್ಷಾಮ, ಅತಿಯಾದ ಬೆಲೆ ಏರಿಕೆ, ಪ್ರಾಕೃತಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ಸರಕಾರದ ವಿವೇಚನೆಗೊಳಪಡಲಿದೆ.
ಸರಕಾರದ ಅದ್ಯಾದೇಶದಿಂದಾಗಿ ರೈತರು, ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಅವಕಾಶವನ್ನು ಮುಕ್ತವಾಗಿಸಲಿದೆ :ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್.
ಇದರಿಂದ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಕಾಯ್ದೆಯ ಸಂಕೋಲೆಗಳಿಂದ ಮುಕ್ತರಾಗಲಿದ್ದಾರೆ.ಈಗ ಅವರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮತ್ತು ಯಾರು ಉತ್ತಮ ಬೆಲೆಗೆ ತಮ್ಮ ಉತ್ಪನ್ನಗಳನ್ನು ಕೊಳ್ಳುತ್ತಾರೋ ಅವರಿಗೆ ಮಾರಾಟ ಮಾಡಲು ಸ್ವತಂತ್ರರು.ಇದು ‘ಒಂದು ದೇಶ ಒಂದು ಮಾರುಕಟ್ಟೆ ’ಪರಿಕಲ್ಪನೆಯೆಡೆಗಿನ ಒಂದು ಹೆಜ್ಜೆ:ಜಾವ್ಡೇಕರ್.
ಈ ತಿದ್ದುಪಡಿಗಳಿಂದಾಗಿ ರೈತರು ಮತ್ತು ಬಳಕೆದಾರರು/ಗ್ರಾಹಕರಿಬ್ಬರಿಗೂ ನೆರವಾಗಲಿದೆ.ಇದು ಬೆಲೆ ಸ್ಥಿರತೆಗೆ ಕಾರಣವಾಗಲಿದೆ.ಹಾಗೆಯೇ ಕೃಷಿ ಉತ್ಪನ್ನಗಳು ಸಂಗ್ರಹಾಗಾರದ ಕೊರತೆಯಿಂದಾಗಿ ಹಾಳಾಗುವುದನ್ನು ತಪ್ಪಿಸುತ್ತದೆ.ಭಾರತದಲ್ಲಿ ಕೃಷಿ-ಆಹಾರ ಉತ್ಪನ್ನಗಳು ಸಂಗ್ರಹಾಗಾರದ ಕೊರತೆಯಿಂದಾಗಿ ಭಾರೀ ಪ್ರಮಾಣದಲ್ಲಿ ವ್ಯರ್ಥವಾಗಿ ಹೋಗುತ್ತಿದೆ ಎಂಬ ದೂರು ವರ್ಷಗಳಿಂದ ಇರುವುದನ್ನು ಇಲ್ಲಿ ಸ್ಮರಿಸಬಹುದು.
ಸಂಪುಟ ಸಭೆಯು ಕೃಷಿ ಉತ್ಪಾದನೆಯಲ್ಲಿ ಮುಕ್ತ ವ್ಯಾಪಾರವನ್ನು ಖಾತ್ರಿ ಪಡಿಸುವ ‘ದ ಫಾರ್ಮಿಂಗ್ ಪ್ರೊಡ್ಯೂಸ್ ಟ್ರೇಡ್ ಅಂಡ್ ಕಾಮರ್ಸ್(ಉತ್ತೇಜನ ಮತ್ತು ಸೌಕರ್ಯ)ಅಧ್ಯಾದೇಶ ೨೦೨೦ನ್ನು ಅನುಮೋದಿಸಿದೆ.ಇದರಿಂದಾಗಿ ಈಗ ರೈತರು ಸಂಸ್ಕರಣಾ ಘಟಕಗಳು, ಕ್ರೋಡೀಕರಿಸುವವರು, ಸಗಟು ವ್ಯಾಪಾರಸ್ಥರು, ಬೃಹತ್ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರ ಜೊತೆ ವ್ಯವಹರಿಸಲು ಅನುಕೂಲವಾಗಲಿದೆ.ಇದು ರೈತರು ಮಧ್ಯವರ್ತಿಗಳಿಲ್ಲದೆಯೇ ಆಧುನಿಕ ತಂತ್ರಜ್ಞಾನ ಬಳಸಲು ಶಕ್ತವಾಗುವಂತೆ ಮಾಡಿ ಮಾರುಕಟ್ಟೆ ವೆಚ್ಚವನ್ನು ತಗ್ಗಿಸಿ ರೈತರ ಆದಾಯವನ್ನು ವೃದ್ಧಿಸಲು ನೆರವಾಗಲಿದೆ.
ಕೇಂದ್ರ ಸಂಪುಟವು ಈ ಸಂದರ್ಭ ಕೋಲ್ಕತ್ತ ಬಂದರು ಮಂಡಳಿಗೆ ದೇಶದ ಪ್ರಪ್ರಥಮ ಕೈಗಾರಿಕಾ ಸಚಿವರೂ , ಭಾರತೀಯ ಜನಸಂಘದ ಸಂಸ್ಥಾಪಕರೂ ಆಗಿದ್ದ, ಜಮ್ಮು-ಕಾಶ್ಮೀರವನ್ನು ಉಳಿಸುವುದಕ್ಕಾಗಿ ಬಲಿದಾನಗೈದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಇಡಲು ಅನುಮೋದನೆ ನೀಡಿದೆ.
ಹಾಗೆಯೇ ಭಾರತೀಯ ಔಷಧಿ ಮತ್ತು ಹೋಮಿಯೋಪಥಿ(ಪಿಸಿಐಎಂ ಅಂಡ್ ಎಚ್)ಗಾಗಿ ಫಾರ್ಮಾಕೋಪೋಯಿಯಾ ಆಯೋಗವನ್ನು ಆಯುಷ್ ಮಂತ್ರಾಲಯದಡಿ ಉಪಕಚೇರಿಯಾಗಿ ಸ್ಥಾಪಿಸಲೂ ಅನುಮೋದನೆ ನೀಡಿದೆ.

LEAVE A REPLY

Please enter your comment!
Please enter your name here