Saturday, August 13, 2022

Latest Posts

ಅಗಲಿದ ಹಿರಿಯ ಬಿಜೆಪಿ ನಾಯಕ ಸುರೇಶ್ ಅಂಗಡಿಯವರಿಗೆ ದ.ಕ.ಜಿಲ್ಲಾ ಬಿಜೆಪಿಯಿಂದ ನುಡಿನಮನ

ಮಂಗಳೂರು: ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಬುಧವಾರ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರಿಗೆ ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಭಾರತೀಯ ಜನತಾ ಪಾರ್ಟಿಯ ಶಕ್ತಿಯಾಗಿದ್ದ ಸುರೇಶ್ ಅಂಗಡಿಯವರ ನಿಧನ ಆಘಾತ ನೀಡಿದೆ. ಪಕ್ಷ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುತ್ತಿದ್ದ ಅಂಗಡಿಯವರು ಸಮರ್ಪಿತ ಭಾವದಿಂದ ಕೆಲಸ ಮಾಡುತ್ತಿದ್ದವರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದರು.

ಸತತವಾಗಿ ನಾಲ್ಕು ಬಾರಿ ಲೋಕಸಭೆ ಪ್ರವೇಶಿಸಿದ ಅಂಗಡಿಯವರು ಹಿರಿಯಣ್ಣನಾಗಿ ನನಗೆ ಮಾರ್ಗದರ್ಶಕರಾಗಿದ್ದರು. ರೈಲ್ವೆ ಸಚಿವರಾಗಿ ಅವರು ಮಾಡಿದ ಕಾರ್ಯವನ್ನು ಜನತೆ ಎಂದೂ ಮರೆಯಲು ಸಾಧ್ಯವಿಲ್ಲ. ಮಂಗಳೂರು ಭಾಗದ ರೈಲ್ವೆಯ ಹಲವಾರು ಸಮಸ್ಯೆಗಳನ್ನು ಅವರು ಮುಂದೆ ನಿಂತು ಬಗೆಹರಿಸಿದ್ದರು. ಮಂಗಳೂರು-ಬೆಂಗಳೂರು ನಡುವೆ ರೈಲು ಓಡಾಟ ಆರಂಭವಾಗುವಲ್ಲಿಯೂ ಅವರ ಕೊಡುಗೆ ದೊಡ್ಡದು. ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದ ಅವರು ಸದಾ ಕ್ರಿಯಾಶೀಲರಾಗಿರುತ್ತಿದ್ದರು.

ಅವರ ಕಾರ್ಯವೈಖರಿಯಿಂದಲೇ ಜನತೆಯ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು.
ಮುಂಬೈ ಕರ್ನಾಟಕದಲ್ಲಿ ಬಿಜೆಪಿಯ ಬಲವರ್ಧನೆಯಲ್ಲಿ ಸಿಂಹಪಾಲು ಅಂಗಡಿಯವರಿಗೆ ಸಲ್ಲುತ್ತದೆ. ಎಲ್ಲರ ಪ್ರೀತಿ ವಿಶ್ವಾಸದಿಂದಲೇ ಈ ಭಾಗದಲ್ಲಿ ಅವರು ಗೆಲುವು ಸಾಧಿಸುತ್ತಿದ್ದರು. ಎಲ್ಲರೊಂದಿಗೆ ಸಾಮಾನ್ಯನಾಗಿ ಬೆರೆಯುವ ಅವರ ವ್ಯಕ್ತಿತ್ವವೇ ಅವರನ್ನು ಮೇರು ಸ್ಥಾನಕ್ಕೆ ಕೊಂಡೊಯ್ದಿತ್ತು. ಮಗು ಹೃದಯದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರು ನನಗೆ ಹಿರಿಯಣ್ಣನಂತಿದ್ದರು. ಈ ಭಾಗದ ರೈಲ್ವೆಯ ಹಲವಾರು ಬೇಡಿಕೆಗಳನ್ನು ಇಟ್ಟಾಗ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ಮುತುವರ್ಜಿ ವಹಿಸಿ ಹತ್ತಾರು ಬೇಡಿಕೆಗಳನ್ನು ಈಡೇರಿಸಿದ್ದರು ಎಂದು ಸಂಸದರು ಅಂಗಡಿಯವರ ಕಾರ್ಯವೈಖರಿಯನ್ನು ನೆನಪಿಸಿಕೊಂಡರು.

ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮೇಯರ್ ದಿವಾಕರ ಪಾಂಡೇಶ್ವರ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಅಂಗಡಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss