ಮಂಗಳೂರು: ಅಡಿಕೆಯು ಹಾನಿಕಾರಕವೆಂಬ ವಾದ ತೀರಾ ಅವೈಜ್ಞಾನಿಕವಾಗಿದ್ದು, ಇದು ಅಡಿಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ.
ಪ್ರಸ್ತುತ, ರಾಜ್ಯದ ಕೆಲವು ಪ್ರತಿಷ್ಠಿತ ಆಯುರ್ವೇದಿಕ್ ಪ್ರಯೋಗಾಲಯಗಳಲ್ಲಿ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಕ್ಯಾಂಪ್ಕೊ ಸಹಕಾರದೊಂದಿಗೆ ಸಂಶೋಧನೆಗಳು ನಡೆಯುತ್ತಿದ್ದು, ಅಡಿಕೆ ಕೃಷಿಕರು ಯಾವುದೇ ಕಾರಣಕ್ಕೂ ಚಿಂತಿತರಾಗುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೊ ತಿಳಿಸಿದೆ.
ಅಡಿಕೆ ಹಾನಿಕಾರಕವೆಂಬ ವಾದವು ಯಾವಾಗ ಹುಟ್ಟಿತೋ ಅಂದಿನಿಂದಲೂ ಅಡಿಕೆಯು ಹಾನಿಕಾರಕವಲ್ಲ, ಆದರೆ ಅಡಿಕೆ ಯಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧೀಯ ತತ್ವಗಳಿವೆ ಎಂಬ ಬಗ್ಗೆ ವಾದಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ಪ್ರತಿ ಸಂಶೋಧನೆಗಳಲ್ಲೂ ಅಡಿಕೆ ಆರೋಗ್ಯಕ್ಕೆ ಪೂರಕವೆಂದೇ ಸಾಬೀತಾಗಿದೆ. ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಪ್ರಸಿದ್ಧ ಸಂಶೋಧಕರು/ ಸಂಶೋಧನಾಲಯಗಳು ಈ ಬಗ್ಗೆ ಸಂಶೋಧನೆಗಳನ್ನು ನಡೆಸಿದ್ದು, ಅಡಿಕೆಯು ಕ್ಯಾನ್ಸರ್ ಜೀವಕಣಗಳನ್ನು ನಿರ್ಜೀವಗೊಳಿಸುವ ಶಕ್ತಿಯನ್ನು ಹೊಂದಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದ್ದು, ಕೇವಲ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಸಾಧ್ಯತೆಯಿಲ್ಲ ಎಂಬುದಾಗಿ ಸಂಶೋಧಕರು ಪ್ರತಿಪಾದಿಸಿದ್ದಾರೆ ಎಂದು ಕ್ಯಾಂಪ್ಕೊ ತಿಳಿಸಿದೆ.