ಅಡುಗೆಮನೆಯಲ್ಲಿ ಏನಿರಬೇಕು? ಇದೇನು ಹೊಸಾ ಪ್ರಶ್ನೆ ಎನ್ನುವ ಹಾಗೆ ನಮ್ಮನ್ನು ಕೇಳುತ್ತಿದ್ದಾರಲ್ಲಾ ಎನಿಸಬಹುದು. ಆದರೆ ಅಡುಗೆ ಮನೆಗಳಲ್ಲಿ ಇಂತಿಷ್ಟು ವಸ್ತುಗಳು ಇರಲೇಬೇಕು ಎಂದು ಹೇಳುತ್ತಾರೆ! ಇದು ನಾವು ಹೇಳುತ್ತಿರುವುದಲ್ಲ ಶೆಫ್ಗಳು ಹೇಳುತ್ತಿರುವುದು, ಶೆಫ್ಗಳ ಪ್ರಕಾರ ಈ ಇಷ್ಟು ವಸ್ತುಗಳು ನಿಮ್ಮ ಅಡುಗೆಮನೆಯಲ್ಲಿ ಇರಲೇ ಬೇಕಂತೆ. ಯಾವ ವಸ್ತು ಅಂತೀರಾ? ನೋಡಿ..
ಮೂರು ರೀತಿಯ ಚಾಕುಗಳು: ಒಂದು ಚಿಕ್ಕದ್ದು, ಇನ್ನೊಂದು ದೊಡ್ಡದು ಮತ್ತೊಂದು ಹರಿತವಾದ್ದು. ಈ ಮೂರು ಚಾಕುಗಳನ್ನು ವಿಭಿನ್ನ ವಸ್ತುಗಳನ್ನು ಕತ್ತರಿಸಲು ಬಳಸುತ್ತಾರಂತೆ. ಚಿಕ್ಕ ಚಾಕು ಹಣ್ಣುಗಳನ್ನು ಕತ್ತರಿಸಲು, ದೊಡ್ಡದು, ಈರುಳ್ಳಿ ಹಸಿಮೆಣಸು ತರಕಾರಿಗೆ ಇನ್ನೊಂದು ಟೊಮ್ಯಾಟೊ. ಬರೀ ಟೊಮ್ಯಾಟೊಗೆ ಬೇರೆ ಚಾಕು ಎಂದುಕೊಳ್ಳುತ್ತೀರಾ? ಟೊಮ್ಯಾಟೊ ಕತ್ತರಿಸಿದವರಿಗೆ ಮಾತ್ರ ಇದು ಅರ್ಥವಾಗುತ್ತದೆ.
ಗಡಿಯಾರ: ಹೌದು ಗಡಿಯಾರಕ್ಕೆ ಅಡುಗೆ ಮನೆಯಲ್ಲಿ ಏನು ಕೆಲಸ? ಹೌದು ಸರಿಯಾದ ಸಮಯಕ್ಕೆ ಅಡುಗೆ ಆಗಬೇಕಲ್ಲವೆ? ಕೆಲಸಕ್ಕೆ ಹೋಗುವವರಿಗೆ ಗಡಿಯಾರವೇ ಮುಖ್ಯ. ಮಕ್ಕಳನ್ನು ಶಾಲೆಗೆ ಕಳಿಸುವವರಿಗೂ ಇದೇ ಮುಖ್ಯ ಅಲ್ಲವಾ? ಅಡುಗೆ ಮನೆಯಲ್ಲಿ ಗಡಿಯಾರ ಇರಲಿ.
ಕಟಿಂಗ್ ಬೋರ್ಡ್: ತುಂಬ ಜನ ಈಗಲೂ ಇಳಿಗೆಮಣಿ ಇಟ್ಟುಕೊಂಡಿದ್ದಾರೆ. ಇದು ಹಳೆಯ ಪದ್ಧತಿ ಹಾಗೂ ಕೆಲವರಿಗೆ ಈಗಲೂ ಅದೇ ರೂಢಿ. ಆದರೆ ಶೆಫ್ಗಳು ಎಲ್ಲಿ ಇದನ್ನು ಬಳಸುತ್ತಾರೆ? ಅವರಿಗೆ ಕಟಿಂಗ್ ಬೋರ್ಡ್ ಬೇಕೇ ಬೇಕು.
ನಾನ್ಸ್ಟಿಕ್ ಪ್ಯಾನ್: ಈಗಿನ ಎಲ್ಲ ಅಡುಗೆ ಮನೆಗಳಲ್ಲು ಇದು ಇದ್ದದ್ದೇ. ಆದರೆ ನಾನ್ಸ್ಟಿಕ್ ಪ್ಯಾನ್ನಲ್ಲಿ ಅಷ್ಟು ರುಚಿ ಬರುವುದಿಲ್ಲ ಎನ್ನುವವರು ಇದ್ದಾರೆ. ಆದರೆ ಸಣ್ಣ ಉರಿಯಲ್ಲಿ ಬೇಯಿಸಿದರೆ ಆಹಾರ ಚಂದ ಅದು ತಳ ಒತ್ತಬಾರದು ಎಂದರೆ ಇದೇ ಪ್ಯಾನ್ ಬೇಕು.
ಸ್ಟೇನ್ಲೆಸ್ ಸೆಟ್: ತುಕ್ಕು ಹಿಡಿಯದ, ಕಲೆ ಅಂಟದ ಪಾತ್ರೆಗಳು ತುಂಬಾನೆ ಮುಖ್ಯ. ಸಮಯವಿಲ್ಲದಾಗ ಈ ಪಾತ್ರೆಗಳನ್ನು ತೊಳೆಯುತ್ತಾ ಸಮಯ ತಳ್ಳಲು ಆದೀತೇ?
ಕೆಟಲ್: ಕೆಟಲ್ ಬ್ಯಾಚುಲರ್ಗಳಿಗೆ ಪಿಜಿಯಲ್ಲಿ ಇರುವವರಿಗೆ ಸಾಕು ನಮಗೇಕೆ ಎನ್ನುತ್ತೀರಾ? ಕೆಟಲ್ ಬೇಕು. ಏಕೆಂದರೆ ಗ್ಯಾಸ್ ಆನ್ ಮಾಡಿ ಪದೇ ಪದೆ ನೀರು ಕಾಯಿಸುವ ಬದಲು ಕೆಟಲ್ನಲ್ಲಿ ಎರಡೇ ನಿಮಿಷಕ್ಕೆ ನೀರು ಕಾಯಿಸಬಹುದು.
ಎಲೆಕ್ಟ್ರಿಕ್ ಸ್ಟೋವ್: ಗ್ಯಾಸ್ ಬುಕ್ ಮಾಡಲು ಮರೆತಿದ್ದು, ಗ್ಯಾಸ್ ಬರುವುದು ಒಂದೆರಡು ದಿನ ಲೇಟಾದಾಗ ಏನು ಮಾಡುತ್ತೀರಿ? ಹೊರಗಿನ ಆಹಾರ ಎಷ್ಟು ತಿನ್ನಲು ಸಾಧ್ಯ? ಮನೆಯಲ್ಲಿ ಎಲೆಕ್ಟ್ರಿಕ್ ಸ್ಟೋವ್ ಒಂದಿದ್ದರೆ ಯಾವ ಆಹಾರವನ್ನಾದರೂ ತಯಾರಿಸಬಹುದು.
ಗಿಡಗಳು: ಅಡುಗೆ ಮಾಡುವಾಗ ಮುಖ್ಯವಾದ್ದು ತಾಳ್ಮೆ. ತಾಳ್ಮೆ ಇಲ್ಲದ ಅಡುಗೆ ರುಚಿ ಬಲ್ಲವನೇ ಬಲ್ಲ, ಹಾಗಾಗಿ ರಿಲಯಾಕ್ಸ್ ಆದ ಮೈಂಡ್ನಿಂದ ಕೆಲಸ ಮಾಡಬೇಕಾದರೆ ಅಡುಗೆ ಮನೆಯಲ್ಲಿ ಹಸಿರಿರಲಿ. ಕಣ್ಣಿಗೆ ಹಸಿರು ಕಂಡರೆ ರಿಲ್ಯಾಕ್ಸ್ ಆಗಿರುತ್ತೀರಿ.