ಮೈಸೂರು: ಆಸ್ತಿ ವಿಷಯಕ್ಕೆ ಅಣ್ಣ ನಿಂದಿಸಿದನಲ್ಲಾ ಎಂದು ತಮ್ಮ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಅಣ್ಣನೂ ತಮ್ಮನ ಸಾವಿಗೆ ಕಾರಣನಾದನೆಲ್ಲಾ ಎಂದು ಮನ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ನಡೆದಿದೆ.
ವಿಷ ಕುಡಿದ ಗಣೇಶ್ (೪೦) ಎಂಬಾತ ಮೃತಪಟ್ಟರೆ, ಆತನ ಅಣ್ಣ ಧರಣೇಶ್ (೪೭) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಇವರಿಬ್ಬರು ಮೈಸೂರಿನ ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರದ ನಿವಾಸಿಗಳಾಗಿದ್ದು, ಆಸ್ತಿ ವಿಷಯವಾಗಿ ನಡೆದ ಕಲಹದಲ್ಲಿ ಅಣ್ಣ ಧರಣೇಶ್, ತಮ್ಮ ಗಣೇಶ್ ನಿಗೆ ಬೈದು ನಿಂದಿಸಿದ್ದಾನೆ. ಇದರಿಂದ ಬೇಸರಗೊಂಡು ಗಣೇಶ್ ವರುಣ ಕೆರೆಯ ಪಕ್ಕದ ಜಮೀನಿನಲ್ಲಿ ವಿಷ ಕುಡಿದು ಸಾವನ್ನಪ್ಪಿದ್ದಾನೆ.
ಈ ವಿಷಯ ಮೈಸೂರಿನ ನರಸಿಂಹರಾಜ ಪೋಲಿಸರ ಮೂಲಕ ಧರಣೇಶ್ ಗೊತ್ತಾಗಿದೆ. ಇದರಿಂದ ಮಾನಸಿಕವಾಗಿ ಜರ್ಜರಿತಗೊಂಡ ಆತ ಕೂಡ ತನ್ನ ಜಮೀನಿನ ಬಳಿ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಮ್ಮನ ಸಾವಿನ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆ ಹಾಗೂ ಅಣ್ಣನ ಸಾವಿನ ಕುರಿತಂತೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಣ್ಣ, ತಮ್ಮನನ್ನು ಕಳೆದುಕೊಂಡ ಕುಟುಂಬದವರ ರೋಧನ ಹೇಳ ತೀರದಾಗಿತ್ತು.