ಹೊಸ ದಿಗಂತ ವರದಿ, ಶಿವಮೊಗ್ಗ:
ನಗರದ ಎನ್ಇಎಸ್ ಮೈದಾನದಲ್ಲಿ ಭಾನುವಾರ ಜನಪ್ರವಾಹ… ಜನರು ನೆರೆದಿರುವುದನ್ನು ಕಂಡು ಏನಿದು ಎಂಬ ಕುತೂಹಲದೊಂದಿಗೆ ಬಂದವರಿಗೆ ಕಂಡಿದ್ದು ತರಹೇವಾರಿ ನಾಯಿಗಳು ಮತ್ತು ಬೆಕ್ಕುಗಳು !
ಸ್ಮಾರ್ಟ್ ಸಿಟಿ ಕೆನೆಲ್ ಕ್ಲಬ್ ವತಿಯಿಂದ ನಗರದ ಎನ್ಇಎಸ್ ಮೈದಾನದಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಶ್ವಾನ ಹಾಗೂ ಬೆಕ್ಕುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಒಂದೆಡೆ ನಾಯಿ ಮಾಲೀಕರು ತಮ್ಮ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆ ತಂದಿದ್ದರೆ, ಮತ್ತೊಂದೆಡೆ ವಿವಿಧ ತಳಿಯ ನಾಯಿಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇದರಿಂದಾಗಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಸ್ತೆ ವಾಹನಗಳಿಂದ ಗಿಜಿಗುಡುತ್ತಿತ್ತು.
33 ವಿವಿಧ ತಳಿಯ ಶ್ವಾನಗಳ ಆಗಮನ
ಪ್ರತಿದಿನ ಕೇವಲ ಮನೆ ಮತ್ತು ಮನೆ ಮುಂದಿನ ರಸ್ತೆಯಲ್ಲೇ ವಾಕಿಂಗ್ ಮಾಡುತ್ತಿದ್ದ ಶ್ವಾನಗಳು ವಿಶಾಲ ಎನ್ಇಎಸ್ ಮೈದಾನಕ್ಕೆ ಬರುತ್ತಿದ್ದಂತೆ ಸ್ವಚ್ಛಂದವಾಗಿ ವಿಹರಿಸಿದವು ! ಅತ್ಯಂತ ಕುಬ್ಜ ತಳಿ ನಾಯಿಗಳಿಂದ ಹಿಡಿದು ಅತ್ಯಂತ ಎತ್ತರದ ನಾಯಿಗಳೂ ಇಲ್ಲಿದ್ದವು. ಅತ್ಯಂತ ಚುರುಕಿನಿಂದ ಕೂಡಿದ್ದರೂ ಕುಳ್ಳ ಜಾತಿಯ ಮಿನಿಯೇಚರ್ ಫಿಂಚರ್ ತಳಿ ಎಲ್ಲರ ಗಮನ ಸೆಳೆಯಿತು. ಇದರ ಜೊತೆಗೆ ಚೌಚೌ, ನ್ಯೂ ಫೌಂಡ್ ಹ್ಯಾಂಡ್, ಡ್ಯಾಶ್ ಹ್ಯಾಂಡ್, ಪಮೇರಿಯನ್, ಬೀಗಲ್ ಹಸ್ಮಿ, ಜರ್ಮನ್ ಕೊಕ್, ಮುಧೋಳ, ರ್ಯಾಟ್ ವೀಲರ್, ಸೇರಿದಂತೆ 33 ವಿವಿಧ ತಳಿಯ 100 ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳ ನಡಿಗೆ, ಮೈಕಟ್ಟು, ಚುರುಕುತನ, ಹುಮ್ಮಸ್ಸು, ಸೌಂದರ್ಯಗಳ ಆಧಾರದ ಮೇಲೆ ಬಹುಮಾನಗಳಿಗೆ ಆಯ್ಕೆ ಮಾಡಲಾಯಿತು.