ಪೊನ್ನಂಪೇಟೆ: ಕಾಫಿ ಬೆಳೆಗೆ ಎನ್ಡಿಆರ್ಎಫ್ ಮಾನದಂಡದಡಿ ಹೆಕ್ಟೇರೊಂದಕ್ಕೆ ಪ್ರಸಕ್ತ ನೀಡಲಾಗುತ್ತಿರುವ 18 ಸಾವಿರ ರೂ.ಗಳನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸುವುದರೊಂದಿಗೆ ಈಗ ಇರುವ 2 ಹೆಕ್ಟೇರ್ ಮಿತಿಯನ್ನು ಕನಿಷ್ಟ 5 ಹೆಕ್ಟೇರ್ವರೆಗೆ ವಿಸ್ತರಿಸಬೇಕು ಎಂದು ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಡ ಕೇಂದ್ರ ಅಧ್ಯಯನ ತಂಡವನ್ನು ಒತ್ತಾಯಿಸಿದೆ.
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಭಾರೀ ಮಳೆಯಿಂದ ಉಂಟಾಗಿರುವ ಆಸ್ತಿಪಾಸ್ತಿ ಹಾಗೂ ಬೆಳೆ ನಷ್ಟದ ಬಗ್ಗೆ ಆಧ್ಯಯನ ನಡೆದಲು ಜಿಲ್ಲೆಗೆ ಆಗಮಿಸಿದ ಕೇಂದ್ರ ಅಧ್ಯಯನ ತಂಡವನ್ನು ಮಡಿಕೇರಿಯಲ್ಲಿ ಮಂಗಳವಾರ ರಾತ್ರಿ ಭೇಟಿ ಮಾಡಿದ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ನಿಯೋಗ ಈ ಮನವಿ ಮಾಡಿದೆ.
ಇದಲ್ಲದೇ ವಿಶ್ವದಲ್ಲೇ ಪೆಟ್ರೋಲಿಯಂ ನಂತರ ಅತೀ ಹೆಚ್ಚು ವಿದೇಶಿ ವಿನಿಮಯ ಕಾಫಿ ಉದ್ಯಮದಿಂದ ಆಗುತ್ತಿದೆ. ಕಾಫಿ ಬೆಳೆಗಾರರು ಅತಿ ಸಂಕಷ್ಟದಲ್ಲಿದ್ದು, ಪ್ರತಿ ವರ್ಷ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದ್ದಾರೆ. ಇದರ ಪರಿಹಾರಕ್ಕಾಗಿ ಸರಕಾರದಿಂದ ಕಾಫಿ ಬೆಳೆಗೆ ವಿಮೆ ಜಾರಿಗೆ ತರಬೇಕು. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ರಸಗೊಬ್ಬರ, ಕೀಟ ನಾಶಕಗಳಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಸತತ ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗಿನ ಬೆಳೆಗಾರ ಸಮುದಾಯ ಅದರಲ್ಲೂ ಕಾಫಿ ಮಾರುಕಟ್ಟೆ ಕಳೆದ 25 ವರ್ಷದ ಹಿಂದಿನ ದರದಲ್ಲಿದೆ. ಆದರೆ ಉತ್ಪಾದನೆ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ರಸಗೊಬ್ಬರ ದರ, ಕಾರ್ಮಿಕರ ವೇತನ ಅತೀ ಹೆಚ್ಚಾಗಿದ್ದು, ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಕಾಫಿ ಬೆಳೆ ಹಾಳಾಗುತ್ತಿದೆ ಎಂದು ನಿಯೋಗದ ಸದಸ್ಯರು ತಂಡದ ಗಮನಸೆಳೆದರು.
ಕೋವಿಡ್ -19 ಸೋಂಕು, ಲಾಕ್ಡೌನ್ ಸಮಸ್ಯೆಗಳಿಂದ ಕಾಫಿ ಪ್ಲಾಂಟೇಷನ್ನಲ್ಲಿ ಕೆಲಸ ಮಾಡಲು ಕಾರ್ಮಿಕರ ಅಭಾವ ಉಂಟಾಗಿದೆ. ಈಶಾನ್ಯ ಭಾರತದ ರಾಜ್ಯಗಳು, ನೆರೆಯ ಜಿಲ್ಲೆಗಳು, ನೆರೆಯ ರಾಜ್ಯಗಳಿಂದ ಕಾರ್ಮಿಕರನ್ನು ಕೊಡಗಿನ ಕಾಫಿ ಪ್ಲಾಂಟೇಷನ್ ಅವಲಂಬಿಸಿದ್ದು, ಪ್ರಸ್ತುತ ಸಮಸ್ಯೆಯಿಂದ ಕಳೆದ 6-7 ತಿಂಗಳಿನಿಂದ ಕಾರ್ಮಿಕರು ಆಗಮಿಸಲಾಗದೆ ಕಾಫಿ ಪ್ಲಾಂಟೇಷನ್ನಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಬೆಳೆಗಾರರ ಮುಖಂಡರು ದೂರಿದರು.
ಕಳೆದ 3 ವರ್ಷಗಳಿಂದ ಸತತ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಬೆಳೆಗಾರ ಸಮುದಾಯ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ, ಭತ್ತ ಇತ್ಯಾದಿ ಬೆಳೆಗೆ ದೊಡ್ದ ನಷ್ಟ ಸಂಭವಿಸಿದೆ. ಇದರಿಂದ ಬ್ಯಾಂಕುಗಳಲ್ಲಿ ಪಡೆದ ಸಾಲ ಕಟ್ಟಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಸಣ್ಣ ಬೆಳೆಗಾರರ ನಿರ್ದಿಷ್ಟ ಪ್ರಮಾಣದ ಸಾಲ ಮನ್ನಾ ಮಾಡಬೇಕು ಮತ್ತು ದೊಡ್ಡ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು.
ನಿರಂತರ ಪ್ರಾಕೃತಿಕ ವಿಕೋಪದಿಂದ ಬೆಳೆನಷ್ಟಗೊಂಡು ತತ್ತರಿಸಿರುವ ಜಿಲ್ಲೆಯ ಬೆಳೆಗಾರರಿಗೆ ಬೇರೆ ಯಾವುದೇ ಆದಾಯ ಮೂಲ ಇಲ್ಲದೇ ಇರುವುದರಿಂದ ಸ್ವಸಹಾಯ ಸಂಘದ ಮೂಲಕ ಸ್ವ ಉದ್ಯೋಗ, ಕಾಫಿ ಹಾಗೂ ಕಾಳುಮೆಣಸು ಸಂಸ್ಕರಣೆ ಮಾಡಿ ಮಾರಾಟ ಮಾಡಲು, ಕಾಫಿ ಬೆಳೆಗೆ ಉತ್ತೇಜನ ನೀಡಲು ವಿಶೇಷ ಪ್ಯಾಕೇಜ್ ಸ್ಥಾಪಿಸಬೇಕು. ಕಾಫಿ ಮಂಡಳಿಯಿಂದ ಕಾಫಿ ಉತ್ಪಾದನೆಗೆ ಪೆÇ್ರೀತ್ಸಾಹ ನೀಡುವ ಸಹಾಯಧನದ ಯೋಜನೆಗಳು ಸ್ಥಗಿತವಾಗಿದ್ದು, ಶೇ. 98.5ರಷ್ಟು ಸಣ್ಣ ಬೆಳೆಗಾರರೇ ಇರುವ ಜಿಲ್ಲೆಯ ಕಾಫಿ ಬೆಳೆಗಾರರ ಸುಧಾರಣೆಗೆ ಮತ್ತು ಉತ್ಪಾದನೆ ಹೆಚ್ಚಿಸಲು ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಮನವಿಯಲ್ಲಿ ಗಮನ ಸೆಳೆಲಾಯಿತು.
ಕೊಡಗು ಜಿಲ್ಲೆಯಲ್ಲಿ ಕಾಫಿ ಪ್ಲಾಂಟೇಷನ್ ಮತ್ತು ಭತ್ತದ ಕೃಷಿಯಿಂದ ಇಲ್ಲಿನ ಪ್ರಮುಖ ನದಿಯಾದ ಕಾವೇರಿ ಮತ್ತು ಅದರ ಉಪನದಿಗಳಿಗೆ ಜೀವಂತಿಕೆ ತುಂಬುತ್ತಿದೆ. ಸತತವಾಗಿ ಕಾಫಿ ಪ್ಲಾಂಟೇಷನ್ ಮತ್ತು ಭತ್ತದ ಕೃಷಿ ನಷ್ಟವಾದರೆ ಇಲ್ಲಿನ ಕಾಫಿ ಹಾಗೂ ಭತ್ತದ ಗದ್ದೆಗಳು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗುವ ಅಪಾಯವಿದೆ. ಹೀಗಾದರೆ ದಕ್ಷಿಣ ಭಾರತದ 8 ಕೋಟಿ ಜನರ ಕುಡಿಯುವ ಹಾಗೂ ಕೃಷಿಗೆ ನೀರುಣಿಸುವ ಕಾವೇರಿ ನದಿಯ ಜಲಮೂಲಗಳು ಬತ್ತಿ ಹೋಗುವ ಆತಂಕವಿದೆ. ಆದ್ದರಿಂದ ಕೊಡಗಿನ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಸೂಕ್ತ ಉತ್ತೇಜನ ನೀಡುವ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಭರವಸೆ: ಇದೇ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಬೆಳೆ ನಷ್ಟ ಪರಿಹಾರ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಸೆಪ್ಟೆಂಬರ್ 10ರ ಅಂತಿಮ ದಿನವನ್ನು ವಿಸ್ತರಣೆ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಬೆಳೆ ನಷ್ಟದ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಒಕ್ಕೂಟದ ಮನವಿಗೆ ಭರವಸೆ ನೀಡಿದರು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಕೈಬಿಲೀರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ ಪಾಲ್ಗೊಂಡಿದ್ದರು.