ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ (2020ರಲ್ಲಿ) ಉಂಟಾದ ಪ್ರಕೃತಿ ವಿಕೋಪದಲ್ಲಿ ಒಟ್ಟು 598.56 ಕೋಟಿ ರೂ.ಗಳ ಮೌಲ್ಯದ ಮೂಲ ಸೌಕರ್ಯಗಳಿಗೆ ಹಾನಿ ಉಂಟಾಗಿದ್ದು, 41,026 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದುಉ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಅತಿವೃಷ್ಟಿಯಿಂದ ಉಂಟಾದ ಹಾನಿ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ ಕೇಂದ್ರ ಅಧಿಕಾರಿಗಳ ತಂಡಕ್ಕೆ ಕೂಡಿಗೆಯ ಕೊಡಗು ಸೈನಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಭೂಕುಸಿತದಿಂದ ಮೂರು ಮಂದಿ ಮೃತಪಟ್ಟಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ, 17 ಜಾನುವಾರುಗಳು ಬಲಿಯಾಗಿವೆ. ಜನವರಿಯಿಂದ ಇಲ್ಲಿಯ ತನಕ ಜಿಲ್ಲೆಯಲ್ಲಿ ಒಟ್ಟು 1926 ಮಿ.ಮೀ. ಮಳೆಯಾಗಿದ್ದು, ಆಗಸ್ಟ್ 6 ರಂದು ಅತಿ ಹೆಚ್ಚು 454 ಮಿ.ಮೀ. ಮಳೆ ಒಂದೇ ದಿನ ದಾಖಲಾಗಿದೆ. ಅತಿವೃಷ್ಟಿ ಹಾಗೂ ಭೂಕುಸಿತದಿಂದ 115 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ ಎಂದು ಅವರು ಕೇಂದ್ರ ತಂಡಕ್ಕೆ ತಿಳಿಸಿದರು.
ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ 346ಮನೆಗಳಿಗೆ ಹಾನಿ ಸಂಭವಿಸಿದೆ. 2,600 ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ 3.96 ಕೋಟಿ, 117 ಶಾಲೆಗಳು ಹಾನಿಗೊಂಡು 3.65ಕೋಟಿ, ಲೋಕೋಪಯೋಗಿ ಇಲಾಖೆಗೆ 103.98 ಕೋಟಿ, ಪಿಆರ್ಇಡಿಗೆ 312.53 ಕೋಟಿ, ಸಣ್ಣ ನೀರಾವರಿ ಇಲಾಖೆಗೆ 27.90 ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 127.51ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 8 ಕೋಟಿ, 54 ಅಂಗನವಾಡಿಗಳಿಂದ 1.08 ಕೋಟಿ, ಆರೋಗ್ಯ ಇಲಾಖೆಗೆ 54 ಲಕ್ಷ, ಕಾವೇರಿ ನೀರಾವರಿ ನಿಗಮಕ್ಕೆ 4.25ಕೋಟಿ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ರೂ 598.56 ಕೋಟಿ ರೂಗಳ ಹಾನಿ ಉಂಟಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.
ಜಿಲ್ಲೆಯಲ್ಲಿ ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ಕೈಗೊಂಡ ರಕ್ಷಣಾ ಕಾರ್ಯ, ಹಾನಿ ಬಗ್ಗೆ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಅಂಕಿ ಅಂಶ ಸಹಿತ ವಿವರಿಸಲಾಯಿತು.
ಮೂರು ವರ್ಷದಲ್ಲಿ 2331 ಕೋಟಿ ನಷ್ಟ: ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಭೂಕುಸಿತದಿಂದ 2331.56 ಕೋಟಿ ರೂ. ಮೌಲ್ಯದ ಮೂಲಸೌಕರ್ಯಗಳು ಹಾನಿಗೊಂಡಿದ್ದು, ಇವುಗಳ ಶಾಶ್ವತ ಮರುಸ್ಥಾಪನೆ, ದುರ್ಬಲ ಪ್ರದೇಶದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದು, ನದಿ, ತೊರೆಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸುವುದು, ಮತ್ತಷ್ಟು ಅಪಾಯಕಾರಿ ಬೆಟ್ಟ ಪ್ರದೇಶಗಳಲ್ಲಿ ನೆಲೆಸಿರುವ ಮಂದಿಯ ಸುರಕ್ಷತೆ ಕ್ರಮಗಳು ಜಿಲ್ಲಾಡಳಿತದ ಮುಂದಿರುವ ಬಹುದೊಡ್ಡ ಸವಾಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಕೇಂದ್ರ ತಂಡದ ಗಮನಸೆಳೆದರು.
ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದಲ್ಲಿ ಕೇಂದ್ರ ಹಣಕಾಸು ಇಲಾಖೆಯ ಎಫ್ಸಿಡಿ ವಿಭಾಗದ ನಿರ್ದೇಶಕ ಡಾ.ಭರತೇಂದು ಕುಮಾರ್ ಸಿಂಗ್, ಕಂದಾಯ ಇಲಾಖೆಯ ಆಯುಕ್ತ ಡಾ.ಮನೋಜ್ ರಾಜನ್ ತಂಡ ಅಗತ್ಯ ಮಾಹಿತಿ ಪಡೆದುಕೊಂಡಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಬನ್ವಾರ್ ಸಿಂಗ್, ಡಿಎಫ್ಓ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.