Wednesday, June 29, 2022

Latest Posts

ಅತ್ಯಾಚಾರ ಸಾಬೀತು: ಶಿಕ್ಷೆ ಪ್ರಮಾಣ ಡಿ.4ಕ್ಕೆ ಪ್ರಕಟ

ಹೊಸ ದಿಗಂತ ವರದಿ, ಮಂಗಳೂರು:

ಬಾಲಕಿ ಜೊತೆ ಸ್ನೇಹ ಬೆಳೆಸಿ ಅತ್ಯಾಚಾರವೆಸಗಿದ ಪ್ರಕರಣ ಜಿಲ್ಲಾ ಮತ್ತು ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ಡಿ.4ಕ್ಕೆ ಪ್ರಕಟಿಸಲಾಗುವುದು. ಬೆಳ್ತಂಗಡಿ ಕಾಶಿಪಟ್ನ ಕುರಪ್ಪಾಡಿ ನಿವಾಸಿ ಸತೀಶ್ ಅಪರಾಧಿ.
2018ನೇ ಜನವರಿ ಕೊನೆ ವಾರದಲ್ಲಿ ಆರೋಪಿಯು ಬಾಲಕಿಯನ್ನು ಮನೆಯ ಪಕ್ಕದಲ್ಲಿರುವ ಗುಡ್ಡಕ್ಕೆ ಬರುವಂತೆ ಹೇಳಿ, ಅಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದನು. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಳು.
2018 ಆ.3ರಂದು ನೊಂದ ಬಾಲಕಿಯ ತಾಯಿ ಮೃತಪಟ್ಟಿದ್ದರು. ಈ ಸಂದರ್ಭ ಮಾವನಿಗೆ ಬಾಲಕಿ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದ್ದರು. ಈ ವೇಳೆ ಅತ್ಯಾಚಾರ ನಡೆದು ಗರ್ಭಿಣಿಯಾಗಿರುವ ಸಂಗತಿಯನ್ನು ಬಾಲಕಿ ಬಾಯಿಬಿಟ್ಟಿದ್ದಳು.
ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ನ್ಯಾಯಾಧೀಶರಾದ ಸಾವಿತ್ರಿ ವೆಂಕಟರಮಣ ಭಟ್ ಅವರು ಸಮಗ್ರ ವಿಚಾರಣೆ ನಡೆಸಿ ಭಾರತೀಯ ದಂಡ ಸಂಹಿತೆ ಕಲಂ 376 ಮತ್ತು ಕಲಂ 6 ಪೋಕ್ಸೋ ಕಾಯಿದೆಯಡಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ನಿರೀಕ್ಷಕರು ಪ್ರಕರಣವನ್ನು ತನಿಖೆ ಮಾಡಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 14 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ 18 ದಾಖಲೆಗಳನ್ನು ಸಾಕ್ಷೀಕರಿಸಿದ್ದರು. ನೊಂದ ಬಾಲಕಿಯ ಮತ್ತು ಮಗುವಿನ ಡಿಎನ್‌ಎ ವರದಿಯಲ್ಲಿ ಸತೀಶ್ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಶಿಕ್ಷೆ ಪ್ರಮಾಣ ಸಂಬಂಧಿಸಿ ಡಿ.4ಕ್ಕೆ ಪ್ರಕರಣ ಮುಂದೂಡಲಾಗಿದೆ.
ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss