Tuesday, July 5, 2022

Latest Posts

ಅದ್ದೂರಿ ವಿವಾಹದಿಂದ ಸಾಲದ ಹೊರೆ: ಸಚಿವ ಎಸ್.ಟಿ.ಸೋಮಶೇಖರ್

ಹೊಸ ದಿಗಂತ ವರದಿ ಮೈಸೂರು:

ಕುಟುಂಬದ ಅಭಿವೃದ್ಧಿಗೆ ಸಾಮೂಹಿಕ ವಿವಾಹದಂತಹ ಹೆಜ್ಜೆ ಅತಿ ಅವಶ್ಯ. ಇಂದು ಬಡವರಾದಿಯಾಗಿ ಹೆಚ್ಚಿನವರು ಶಿಕ್ಷಣಕ್ಕಿಂತ ಹೆಚ್ಚಾಗಿ ವಿವಾಹಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಸಾಲದ ಹೊರೆಯಲ್ಲಿ ಸಿಲುಕುತ್ತಿದ್ದಾರೆ. ಆದರೆ, ಶ್ರೀಕ್ಷೇತ್ರ ಸುತ್ತೂರು ಮಠದ ಈ ಕಾರ್ಯ ಶ್ಲಾಘನೀಯ ಹಾಗೂ ಮಾದರಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಂಗಳವಾರ ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಶ್ರೀಮಠದ ವತಿಯಿಂದ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ -95 ಕಾರ್ಯಕ್ರಮದಲ್ಲಿ “ವಚನಕ್ಕೊಂದು ಕಥೆ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ವಿವಾಹಕ್ಕೆ ಅತಿಯಾಗಿ ಖರ್ಚು ಮಾಡುತ್ತಿರುವುದು ಕುಟುಂಬದ ಅಭ್ಯುದಯಕ್ಕೆ ಮಾರಕವಾಗಿದೆ. ಸಾಲ ಮಾಡಿ ಮದುವೆ ಮಾಡಿ ಹತ್ತಾರು ವರ್ಷಗಳಾದರೂ ಸಹ ಸಾಲಮುಕ್ತರಾಗದೆ ಪರಿತಪಿಸುತ್ತಿರುತ್ತಾರೆ. ಶ್ರೀಮಠ ಆಯೋಜಿಸುವ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದರೆ ಸಾಲ ಮಾಡುವ ಸಂಭವವೇ ಇರುವುದಿಲ್ಲ ಎಂದು ಹೇಳಿದರು.

ತಮಗೆಲ್ಲಾ ತಿಳಿದಂತೆ ‘ಹತ್ತೂರಿಗೆ ಮಿಗಿಲು ಸುತ್ತೂರು ಜಾತ್ರೆ’ ಎಂಬ ಖ್ಯಾತಿ ಹೊಂದಿರುವ ಸುತ್ತೂರು ಜಾತ್ರೆಯು ಕೊರೋನಾ ಸೋಂಕಿನ ಕಾರಣಕ್ಕೆ ಈ ವರ್ಷ ಸರಳವಾಗಿ ಜರುಗುತ್ತಿದೆ. ಸುತ್ತೂರು ಮಠದ ವತಿಯಿಂದ ಅನೇಕ ಸಮಾಜೋದ್ಧಾರಕ ಕಾರ್ಯಗಳು ನಡೆಯುತ್ತಿದ್ದು, ಅದರಲ್ಲಿ ಸಾಮೂಹಿಕ ವಿವಾಹವು ಒಂದು. ಜಾತ್ರಾ ಸಂದರ್ಭದಲ್ಲಿ ಸುಮಾರು 200 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿದ್ದು, ಅದನ್ನು ರದ್ದುಗೊಳಿಸಿ ಇಡೀ ವರ್ಷ ಪ್ರತಿ ತಿಂಗಳು ಉಚಿತ ಮಾಂಗಲ್ಯ ಹಾಗೂ ವಸ್ತçಗಳನ್ನು ವಿತರಿಸಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ನನಗೆ ಹರ್ಷವಾಗುತ್ತಿದೆ. ಈ ಕ್ಷೇತ್ರದಲ್ಲಿ ಮದುವೆ ಆಗುತ್ತಿರುವ ಜೋಡಿಗಳಿಗೆ ಪೂಜ್ಯರುಗಳು ಆಶೀರ್ವಾದ ದೊರೆಯುತ್ತಿರುವುದರಿಂದ ಅವರಿಗೆ ಸಾರ್ಥಕ ಮನೋಭಾವ ಮೂಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ತಮ್ಮ ಪ್ರವಚನಗಳ ಮೂಲಕ ನಾಡಿನೆಲ್ಲೆಡೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಸಹಜ ಹಾಗೂ ಸರಳ ಜೀವನಕ್ಕೆ ಉಪಯೋಗವಾಗುವಂತಹ ಪ್ರವಚನಗಳು ಜನ ಸಾಮಾನ್ಯರಿಗೂ ಅರ್ಥವಾಗುತ್ತವೆ. ಹಾಗೆಯೆ ಅವರು ಬದುಕಿನಲ್ಲಿ ಅಳವಡಿಸಿಕೊಳ್ಳ ಬಹುದಾಗಿರುತ್ತದೆ. ಇಂಥ ಸರಳ ಜೀವನವನ್ನು ಮೈಗೂಡಿಸಿಕೊಂಡಿರುವ ಪೂಜ್ಯರು ಅನೇಕರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಇಂದು ಶರಣಿ ಎಂ.ಎ.ನೀಲಾಂಬಿಕಾರವರು ರಚಿಸಿರುವ ವಚನಕ್ಕೊಂದು ಕಥೆ ಎಂಬ ಪುಸ್ತಕವನ್ನು ನಾನು ಬಿಡುಗಡೆ ಮಾಡಿರುತ್ತೇನೆ. ಇಂತಹ ಮೌಲಿಕ ಕೃತಿಯನ್ನು ರಚಿಸಿದ್ದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ರಾಜೇಂದ್ರ ಶಿಶು ಎಂಬ ಕಾವ್ಯನಾಮದಲ್ಲಿ ಶರಣೆ ನೀಲಾಂಬಿಕಾ ರವರು ಹಲವಾರು ಕೃತಿಗಳನ್ನು ರಚಿಸಿರುತ್ತಾರೆ. ವಚನ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುತ್ತಾರೆ. ಅವರ ತಂದೆ ಶ್ರೀ ಸಿ.ಅಂಕಪ್ಪನವರು ಹತ್ತಿರದ ಹೊಸಕೋಟೆ ಗ್ರಾಮದವರು. ಅವರು ರೈಲ್ವೆ ಇಲಾಖೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದರೂ, ಸಾಹಿತ್ಯ ರಚನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಅನೇಕ ಪುಸ್ತಕಗಳನ್ನು ರಚಿಸಿದ್ದರು, ನಾಟಕಗಳ ರಚನೆ ಹಾಗೂ ಅಭಿನಯದ ಮೂಲಕ ಕಲಾ ಸೇವೆಯನ್ನು ಸಲ್ಲಿಸಿದ್ದರು.

ಕುಟುಂಬದ ಪರಂಪರೆಯನ್ನು ಮುಂದುವರಿಸಿರುವ ಶರಣೆ ನೀಲಾಂಬಿಕಾರವರು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ. ಇವರು ಇನ್ನೂ ಹಲವು ಕೃತಿಗಳನ್ನು ರಚಿಸಲಿ ಎಂದು ಹಾರೈಸುತ್ತೇನೆ ಎಂದರು. ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರೆ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ಅಧ್ಯಕ್ಷತೆ ವಹಿಸಿದ್ದರು. ಸಮ್ಮುಖ ವಹಿಸಿರುವ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿ, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss