ಮೈಸೂರು: ನನಗೆ ಸಚಿವ ಸ್ಥಾನ ಕೊಟ್ಟೇ ಕೊಡಬೇಕು ಎಂದು ಕೇಳುತ್ತಿಲ್ಲ, ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿಗಳಿಗೆ ಸೇರಿದ್ದು, ಆದರೆ ಬಿ.ಎಸ್.ಯಡಿಯೂರಪ್ಪರು ನಾಲಿಗೆ ಮೇಲೆ ನಿಂತ ನಾಯಕರಾಗಿದ್ದಾರೆ. ಹಾಗಾಗಿ ಅವರು ನಾಲಿಗೆ ಕಳೆದುಕೊಂಡ ನಾಯಕರಾಗಬಾರದು. ಇದು ಜನಾಭಿಪ್ರಾಯವಾಗಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿಗೆ ತಪ್ಪದ ಮಗ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಶಕ್ತಿ ಅವರಿಗೆ ಇದೆ. ಇದಕ್ಕೆ ಅವರು ಅಪವಾದವಾಗಬೇಡಿ, ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲೋರು ನೀವೊಬ್ಬರೇ ಮಾತ್ರ. ಹಾಗಾಗಿ ನಿಮ್ಮ ಮಾತಿನ ಮೇಲೆ ನನಗೆ ವಿಶ್ವಾಸವಿದೆ ಎಂದು ಸಿಎಂ ಯಡಿಯೂರಪ್ಪರಿಗೆ ಹೇಳಿದರು.
ದೇಶದ ರಾಜಕಾರಣ ನಡೆಯೋದೇ ಭಾವನೆ ಮತ್ತು ನಂಬಿಕೆ ಮೇಲೆ, ಇದೆರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ, ಜನನಾಯಕರು ಈ ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.