ಹೊಸದಿಲ್ಲಿ:ರಾಜ್ಯ ವಿಧಾನ ಮಂಡಲದ ಅಧಿವೇಶನದ ಪ್ರಾರಂಭವಾಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ತಿಳಿಸಿದ್ದಾರೆ.
ಕರ್ನಾಟಕದ ಭವನ-1 ಕಾವೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಅವರು, ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜೊತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ, ಶುಕ್ರವಾರ ಸಮಾಲೋಚನೆ ನಡೆಸಲಾಗಿದೆ. ಪಕ್ಷದ ರಾಷ್ಟ್ರಾಧ್ಯಕ್ಷರು ಪ್ರಧಾನಿ ಜೊತೆಗೆ ಚರ್ಚಿಸಿ ಸಂಜೆ ವೇಳೆಗೆ ಸೂಚನೆ ನೀಡುವ ಸಾಧ್ಯತೆ ಇದೆ ಎಂಬ ಅಂಶವನ್ನು ಬಹಿರಂಗಪಡಿಸಿದ ಮುಖ್ಯಮಂತ್ರಿಯವರು ವರಿಷ್ಠರ ಅನುಮತಿ ಮತ್ತು ಸಹಮತಿ ದೊರೆತ ಕೂಡಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ.
ದಿಲ್ಲಿ ಭೇಟಿ ಅತ್ಯಂತ ಯಶಸ್ವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ. ರಾಜ್ಯದ ಪ್ರಸ್ತಾವನೆಗಳಿಗೆ ಪ್ರಧಾನಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಬಹುತೇಕ ಬೇಡಿಕೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ದೊರೆಯಲಿದೆ ಎಂಬ ವಿಶ್ವಾಸ ತಮ್ಮಲ್ಲಿದೆ.
ರಾಜ್ಯದ ವಿವಿಧ ಯೋಜನೆಗಳ ಕುರಿತು ಅನುಮೋದನೆ ಹಾಗೂ ಮಂಜೂರಾತಿಗಾಗಿ ಕೇಂದ್ರದ ಹಲವು ಸಚಿವರನ್ನೂ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಎಲ್ಲರು ಕೂಡ ರಾಜ್ಯದ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ದಿಲ್ಲಿ ಭೇಟಿ ಅತ್ಯಂತ ಯಶಸ್ವಿಯಾಗಿದೆ ಎಂದು ಯಡಿಯೂರಪ್ಪ ಬಣ್ಣಿಸಿದ್ದಾರೆ.