ಹೊಸದಿಗಂತ ವರದಿ,ರಾಮನಗರ:
ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಸ್ಫೂರ್ತಿ ಮೂಡುವಂತೆ ಬೋಧಿಸುವುದೇ ಉಪನ್ಯಾಸಕರ ಅತ್ಯುತ್ತಮ ಕೆಲಸ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಮನಗರ ಜಿಲ್ಲಾ ಪ್ರಭಾರಿ ಉಪ ನಿರ್ದೇಶಕ ಗುರುಸಿದ್ದಯ್ಯ ಅಭಿಪ್ರಾಯಪಟ್ಟರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಪ್ರಾಂಶುಪಾಲರ ಸಂಘದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಪ್ರತಿ ದಿನ ವಿದ್ಯಾರ್ಥಿಗಳನ್ನು ಹೊಸ ಹೊಸ ವಿಷಯಗಳ ಕಲಿಕೆಯ ಕುತೂಹಲ, ಶೋಧನೆಗಳ ಕಡೆಗೆ ಆಕರ್ಷಿತರಾಗುವಂತೆ ಅಧ್ಯಾಪಕರು ಪ್ರಭಾವ ಬೀರಬೇಕು.
ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಭಯ ನಿವಾರಿಸಿ ಭರವಸೆಯನ್ನು ಬೆಳೆಸಬೇಕು. ಭವಿಷ್ಯದ ಬದುಕಿನ ಬಗೆಗೆ ಆತ್ಮವಿಶ್ವಾಸ ಹಿಮ್ಮಡಿಗೊಳಿಸಬೇಕು. ಆಗ ವಿದ್ಯಾರ್ಥಿಗಳು ಕಲಿಕೆಯತ್ತ ಮುಖ ಮಾಡುತ್ತಾರೆ ಮತ್ತು ಉನ್ನತ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗವನ್ನೂ ಗಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ನೀಟ್, ಸಿ.ಇ.ಟಿ, ಜೆ.ಇ.ಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಸಿದ್ಧತೆ ಮಾಡಿಕೊಂಡಿರುತ್ತಾರೆ. ಈ ಎಲ್ಲಾ ಯೋಜನೆಗಳು ಕೊರೋನಾ ವೈರಸ್ ಸಂಕಟದಿAದಾಗಿ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಉಪ ನಿರ್ದೇಶಕರಿಗೆ ಜಿಲ್ಲಾ ಪ್ರಾಂಶುಪಾಲರ ಸಂಘ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಉಪ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿ ರಾಮನಗರ ಜಿಲ್ಲೆಗೆ ಆಗಮಿಸಿರುವ ಗುರುಸಿದ್ದಯ್ಯನವರು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವ ಸದುದ್ದೇಶ ಹೊಂದಿದ್ದಾರೆ. ಈಗಾಗಲೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2021ರ ಮೇ ತಿಂಗಳಿನ ಮೂರನೇ ವಾರದಲ್ಲಿ ನಡೆಯಲಿದೆ ಎಂದು ಸರ್ಕಾರ ಹೇಳಿದ್ದು, ಶೇ.30 ರಷ್ಟು ಪಠ್ಯಕ್ರಮವನ್ನು ಕಡಿತ ಮಾಡಿದೆ.
ಇದರ ಸದುಪಯೋಗ ವಿದ್ಯಾರ್ಥಿಗಳಿಗೆ ದೊರೆಯಬೇಕಾದರೆ ಎಲ್ಲಾ ಅಧ್ಯಾಪಕರು ಶೇ.70 ರಷ್ಟು ಪಠ್ಯಕ್ರಮವನ್ನು ಅಚ್ಚುಕಟ್ಟಾಗಿ ಬೋಧಿಸಿ, ಪರೀಕ್ಷೆ ಬರೆಯಲು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಆಗ ಜಿಲ್ಲೆಯ ಫಲಿತಾಂಶದಲ್ಲಿ ಏರಿಕೆಯಾಗಲು ಸಾಧ್ಯವಾಗುತ್ತದೆ ಎಂದರು. ಪ್ರಾಂಶುಪಾಲರ ಸಂಘದ ಖಜಾಂಚಿ ಎಂ.ಕೃಷ್ಣ, ಪ್ರಾಂಶುಪಾಲರಾದ ವೆಂಕಟಲಕ್ಷ್ಮಮ್ಮ, ಉಪನ್ಯಾಸಕ ಎಂ.ಎನ್.ಪ್ರದೀಪ್, ಜಗದೀಶ್ ಇದ್ದರು.