ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ವಿರುದ್ಧ ದೂರು ನೀಡಿದ್ದ ನಟಿ ಪಾಯಲ್ ಘೋಶ್ ಇದೀಗ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
2013ರಲ್ಲಿ ಅನುರಾಗ್ ಕಶ್ಯಪ್ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್ ಆಕ್ಟ್ನಡಿ ಅನುರಾಗ್ ಕಶ್ಯಪ್ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್ ಅವರನ್ನು ಕರೆದು ವಿಚಾರಣೆ ಮಾಡಿಲ್ಲ.
ಇದರಿಂದ ಅಸಮಾಧಾನಗೊಂಡಿರುವ ಪಾಯಲ್, ಅನುರಾಗ್ ವಿರುದ್ಧ ನಾನು ದೂರು ಕೊಟ್ಟು ಒಂದು ವಾರವಾಯಿತು. ಪೊಲೀಸರು ನನ್ನನ್ನು ಸಾಕಷ್ಟು ಬಾರಿ ಠಾಣೆಗೆ ಅಲೆದಾಡಿಸಿದ್ದಾರೆ. ಪರೀಕ್ಷೆಗೆಂದು ಆಸ್ಪತ್ರೆಗೇ ಮೂರು ದಿನ ಕರೆಸಿಕೊಂಡಿದ್ದಾರೆ. ಆದರೆ, ಆರೋಪಿ ಅನುರಾಗ್ ಅವರನ್ನು ಒಮ್ಮೆಯೂ ಕರೆಸಿಲ್ಲ. ನಾನು ಬೀದಿಬೀದಿ ಸುತ್ತುತ್ತಿದ್ದರೆ, ಅನುರಾಗ್ ಮನೆಯಲ್ಲಿ ಆರಾಮವಾಗಿದ್ದಾನೆ’ ಎಂದು ಪಾಯಲ್ ಹೇಳಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು, ‘ಅನುರಾಗ್ ವಿರುದ್ಧ ಒಂದು ದೂರು ಕೊಟ್ಟಿದ್ದೆ. ನಾನೊಬ್ಬಳಷ್ಟೇ ಅಲ್ಲ, ಬೇರೆಯವರು ಸಹ ಅನುರಾಗ್ ಮೇಲೆ ಅಂತದ್ದೇ ಆರೋಪಗಳನ್ನು ಹೊರಿಸಿದ್ದಾರೆ. ಆದರೆ, ದೂರು ಕೊಟ್ಟಿದ್ದಿಕ್ಕೆ ಪೊಲೀಸರು ನನ್ನನ್ನೇ ವಿಚಾರಣೆ ಮಾಡುತ್ತಿದ್ದಾರೆ. ಆ ಕಡೆ ಅನುರಾಗ್ ಮನೆಯಲ್ಲಿ ಚಿಲ್ ಮಾಡುತ್ತಿದ್ದೇನೆ. ನನಗೆ ನ್ಯಾಯ ಸಿಗುತ್ತದಾ ಸಾರ್’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದರು ಪಾಯಲ್.
‘ನಾನು ಕೆಲವು ದಿನಗಳಿಂದ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ. ಒಂದು ಪಕ್ಷ, ಅನುರಾಗ್ ಅವರನ್ನು ಕರೆಸಿ, ಈ ವಿಷಯದಲ್ಲಿ ವಿಚಾರಣೆ ನಡೆಸದಿದ್ದರೆ, ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇನೆ’ ಎಂದು ಪಾಯಲ್ ಹೇಳಿಕೊಂಡಿದ್ದಾರೆ.