spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಅನ್ ಲಾಕ್ ಎಫೆಕ್ಟ್ : ಮತ್ತೆ ಗರಿಗೆದಲಾರಂಭಿಸಿದ ಮೈಸೂರು ಪ್ರವಾಸೋದ್ಯಮ

ಮೈಸೂರು: ಮಹಾಮಾರಿ ಕೊರೋನಾ ವೈರಾಣು ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಅನ್ ಲಾಕ್-೪ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಇದರಿಂದಾಗಿ ಮೈಸೂರು ಭಾಗದ ಪ್ರವಾಸೋದ್ಯಮ ಇದೀಗ ಮತ್ತೆ ಗರಿಗೆದಲಾರಂಭಿಸಿದೆ.
ಆಗಸ್ಟ್ ತಿಂಗಳ ಅಂತ್ಯದ ತನಕ ಭಣಗುಡುತ್ತಿದ್ದ ಪ್ರವಾಸಿ ತಾಣಗಳು, ಇದೀಗ ಪ್ರವಾಸಿಗರ ಭೇಟಿಯ ಹೆಚ್ಚಳದಿಂದಾಗಿ ಚೇತರಿಕೆ ಕಾಣತೊಡಗಿವೆ. ಈಗ ಎಲ್ಲವೂ ಮುಕ್ತ, ಮುಕ್ತವಾಗಿರುವ ಕಾರಣ ಮೈಸೂರಿನ ಪರಿಸ್ಥಿತಿಯು ಕೂಡ ಚೇತರಿಕೆ ಕಾಣತೊಡಗಿದೆ. ಮೈಸೂರಿನಲ್ಲಿ ಎಲ್ಲಾ ವ್ಯಾಪಾರ, ವಹಿವಾಟುಗಳು ಕೊರೋನಾ ಆಗಮನದಿಂದ ಹಿಂದಿನ ದಿನಗಳಲ್ಲಿ ಇದ್ದಂತಹ ಪರಿಸ್ಥಿತಿಗೆ ಹೊರಳಲಾರಂಭಿಸಿದ್ದು, ಜನ ಜೀವನ ಕೂಡ ಈ ಕೊರೋನಾ ಬರುವ ಈ ಹಿಂದಿನ ಸ್ಥಿತಿಗೆ ಮರಳಲಾರಂಭಿಸಿದೆ.
ರಾಜ್ಯದ ರಾಜಧಾನಿ ಬೆಂಗಳೂರು ನಗರ ಹೊರತುಪಡಿಸಿದರೆ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವುದು ಮೈಸೂರು ಜಿಲ್ಲೆಯಲ್ಲಿಯೇ. ನಿತ್ಯವೂ ೪೦೦ರಿಂದ ಒಂದು ಸಾವಿರ ತನಕ ಹೊಸದಾಗಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿನಿಂದ ಗುಣಹೊಂದುತ್ತಿರುವವರ ಸಂಖ್ಯೆ ಕೂಡ ಹೆಚ್ಚಳಗೊಂಡಿದೆ. ಆದರೇ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ ಕೂಡ ಹೆಚ್ಚಿದೆ. ಪರಿಸ್ಥಿತಿ ಈ ರೀತಿಯಿದ್ದರೂ ಕೂಡ ಮೈಸೂರಿನ ಜನರು ಕೊರೋನಾಗೆ ಈಗ ಕ್ಯಾರೆ ಎನ್ನುತ್ತಿಲ್ಲ. ಈ ಹಿಂದಿನಂತೆ ಕೊರೋನಾಸುರನಿಗೆ ಹೆದರಿ ಮನೆಯಲ್ಲಿಯೇ ಕೈಕಟ್ಟಿ ಕೂರುತ್ತಿಲ್ಲ, ಬದಲಾಗಿ, ಕೊರೋನಾಸುರನ ಆರ್ಭಟ, ಅಟ್ಟಹಾಸದ ನಡುವೆಯೂ ಜೀವನ ನಡೆಸುವುದನ್ನು ಕಲಿಯಲಾರಂಭಿಸಿದ್ದಾರೆ. ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಮಾನಸಿಕವಾಗಿ ಸಜ್ಜಾಗಿ ಬಿಟ್ಟಿದ್ದಾರೆ. ಹಾಗಾಗಿಯೇ ನೆಲಕಚ್ಚಿದ ಮೈಸೂರು ಭಾಗದ ಪ್ರವಾಸೋದ್ಯಮ ಮತ್ತೆ ತಲೆ ಎತ್ತಲಾರಂಭಿಸಿದೆ.
ಪ್ರವಾಸಿ ತಾಣಗಳಿಗೆ ಹೆಚ್ಚಿದ ಪ್ರವಾಸಿಗರ ಸಂಖ್ಯೆ :
ಕೊರೋನಾದಿಂದಾಗಿ ಕಳೆಗುಂದಿದ್ದ ಮೈಸೂರಿನ ಪ್ರವಾಸಿ ತಾಣಗಳಿಗೆ ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡಲಾರಂಭಿಸಿದ್ದಾರೆ. ವಿಶ್ವವಿಖ್ಯಾತ ಮೈಸೂರಿನ ಅಂಬಾ ವಿಲಾಸ ಅರಮನೆಗೆ ಆಗಸ್ಟ್ ತಿಂಗಳಲ್ಲಿ ಪ್ರತಿನಿತ್ಯ ೧೦ ರಿಂದ ೨೫ ಜನ ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಿದ್ದರು. ವರ‍್ಯಾಂತ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ನೂರನ್ನೂ ದಾಟುತ್ತಿರಲಿಲ್ಲ. ಆದರೆ ಇದೀಗ ನಿತ್ಯವೂ ೨೫೦ರಿಂದ ೫೦೦ ಜನರ ತನಕ ಪ್ರವಾಸಿಗರು ಅರಮನೆಗೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯ ದಿನಗಳು, ರಜಾ ದಿನಗಳಲ್ಲಿ ೨೫೦೦ ರಿಂದ ೩ ಸಾವಿರ ಜನ ಪ್ರವಾಸಿಗರು ಭೇಟಿ ನೀಡಲಾರಂಭಿಸಿದ್ದಾರೆ. ಇದರಿಂದಾಗಿ ಅರಮನೆಗೆ ಬರುತ್ತಿರುವ ಆದಾಯದಲ್ಲಿಯೂ ಚೇತರಿಕೆ ಕಾಣಲಾರಂಭಿಸಿದೆ. ಕೊರೋನಾ ಬರುವ ಮುನ್ನಾ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಅರಮನೆಗೆ ೭ ರಿಂದ ೯ ಸಾವಿರ ತನಕ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವರ್ಷಕ್ಕೆ ೧೦ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಇವರಲ್ಲಿ ದೇಶ, ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ೧ ಲಕ್ಷ ದಾಟುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅರಮನೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿಲ್ಲ, ಬದಲಾಗಿ ಸ್ಥಳೀಯ ಜನರು ಭೇಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಬರುವ ನಿರೀಕ್ಷೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅರಮನೆ ಮಂಡಳಿಯ ಉಪನಿದೇರ್ಶಕ ಸುಬ್ರಹ್ಮಣ್ಯ.
ಇನ್ನು ಮೈಸೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇನ್ನು ದೇವಸ್ಥಾನಗಳಲ್ಲಿ ಸೇವೆಗಳಿಗೆ ಹಾಗೂ ಪ್ರಸಾದ ವಿತರಣೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಹಾಗೂ ವಾರಂತ್ಯ, ರಜೆ ದಿನಗಳಂದು ಹಾಕುತ್ತಿದ್ದ ಸಾರ್ವಜನಿಕರ ಪ್ರವೇಶ ನಿರ್ಬಂಧವನ್ನು ಇದೀಗ ಸಂಪೂರ್ಣವಾಗಿ ತೆಗೆದು ಹಾಕಿರುವುದರಿಂದ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಇದೀಗ ಪ್ರವಾಸಿಗರು, ಭಕ್ತರ ದಂಡೇ ಹರಿದು ಬರಲಾರಂಭಿಸಿದೆ. ಚಾಮುಂಡಿ ಬೆಟ್ಟದಲ್ಲಿ ಸರ್ಕಾರದ ಆದೇಶದ ಮೇರೆಗೆ ಈ ಹಿಂದಿನಂತೆ ಪೂಜಾ ಸೇವೆಗಳನ್ನು ದೇವಸ್ಥಾನ ಆಡಳಿತ ಮಂಡಳಿ ಪ್ರಾರಂಭಿಸಿದೆ. ಇದರಿಂದಾಗಿ ಪೂಜೆ, ಸೇವೆಗಳು ಮತ್ತೆ ಕಳೆಗಟ್ಟಿದ್ದು, ಭಕ್ತ ಸಾಗರ ದೇವಾಲಯಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ದೇವಾಲಯದಲ್ಲಿ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಸಾರಿಗೆ ವ್ಯವಸ್ಥೆ ಚೇತರಿಕೆ : ಕೊರೋನಾದಿಂದಾಗಿ ಸಾರಿಗೆ ವ್ಯವಸ್ಥೆಯಲ್ಲಿ ಇಂತಿಷ್ಟೇ ಪ್ರಯಾಣಿಕರು ಕೂಳಿತುಕೊಳ್ಳಬೇಕು ಎಂದು ಹಾಕಲಾಗಿದ್ದ ನಿರ್ಬಂಧ ತೆಗೆದು ಹಾಕಿದ್ದರಿಂದ ಪ್ರಯಾಣಿಕರು ಸಾರಿಗೆ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಇದರಿಂದ ಶೇ.೪೦ ರಿಂದ ೫೦ ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ನಾಲ್ಕೈದು ತಿಂಗಳಿAದ ಬಣಗುಡುತ್ತಿದ್ದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಇದೀಗ ಪ್ರಯಾಣಿಕರ ಸದ್ದುಗದ್ದಲದಿಂದ ಕೂಡಿದೆ.ನಿರ್ದಿಷ್ಟ ಪ್ರಯಾಣಿಕರು ಮಾತ್ರ ಸಂಚರಿಸಬೇಕೆಂಬ ನಿಯಮ ಸಡಿಲಿಕೆಯಾಗಿದ್ದು, ಹೆಚ್ಚು ಹೊತ್ತು ಬಸ್ ನಿಲುಗಡೆಗೆ ಅವಕಾಶವಿಲ್ಲ, ಉಳಿದಂತೆ ಆಸನಗಳ ಭರ್ತಿಗೆ ಅವಕಾಶವಿದೆ. ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡುವುದನ್ನು ಸಾರಿಗೆ ಇಲಾಖೆ ಕೈ ಬಿಟ್ಟಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಇಲ್ಲದ ಪ್ರಯಾಣಿಕರಿಗೆ ಅವಕಾಶ ನಿಷೇಧಿಸಿದೆ.ಸಡಿಲಿಕೆ ಆಗುತ್ತಿದ್ದಂತೆ ಸಹಜ ಸ್ಥಿತಿಗೆ ಸಾರಿಗೆ ವ್ಯವಸ್ಥೆ ಮರಳುತ್ತಿದ್ದು, ಲಾಕ್‌ಡೌನ್‌ಗೂ ಮುಂಚೆ ೨೪೦೦ ಟ್ರಿಪ್ ಸಂಚರಿಸುತ್ತಿತ್ತು. ಇನ್ನೂ ಲಾಕ್‌ಡೌನ್ ವೇಳೆ ೪೦೦ ರಿಂದ ೫೦೦ ಟ್ರಿಪ್ ಸಂಚರಿಸಿದೆ. ಈಗ ೧೦೦೦ ಟ್ರಿಪ್‌ಗಳನ್ನ ಒದಗಿಸಿದ್ದೇವೆ ಎಂದು ವಿಭಾಗೀಯ ಸಂಚಾಲನಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.

-ಎಸ್.ಮಹೇಶ್

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap