ಅಪಘಾತದಲ್ಲಿ ಗಾಯಗೊಂಡ ದಂಪತಿಯನ್ನು ರಕ್ಷಿಸಿದ ವ್ಯಕ್ತಿಯನ್ನು 25 ವರ್ಷದ ಬಳಿಕವೂ ನೆನಪಿಸಿಕೊಂಡು ಸನ್ಮಾನಿಸಿದರು!

0
432

ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಬಳಿ 25 ವರ್ಷದ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡ ದಂಪತಿಯನ್ನು ರಕ್ಷಿಸಿದ ವ್ಯಕ್ತಿಯನ್ನು 25 ವರ್ಷದ ಬಳಿಕವೂ ನೆನಪಿಸಿಕೊಂಡು ಸನ್ಮಾನಿಸಿದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಗೊಂಡ ದಂಪತಿ ಹಿಂದುಗಳಾಗಿದ್ದರೆ, ಅಂದು ಅಪಘಾತದಿಂದ ಆಘಾತ ಹೊಂದಿದ ಈ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದವರು ಮುಸ್ಲಿಂ ಆಗಿದ್ದಾರೆ. ಇವರಿಬ್ಬರ ಕಾರ್ಯಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈರಲ್ ಆದ ಬರಹ ಹೀಗಿದೆ
25 ವರ್ಷದ ಹಿಂದೆ ಎನ್‌ಎಂಪಿಟಿ ಸಮೀಪ ಒಂದು ಟ್ರಕ್‌ಗೆ ಕಾರೊಂದು ಬಲವಾಗಿ ಹೊಡೆದು ಭೀಕರ ಅವಘಡವಾಯಿತ್ತು. ಕಾರಿನಲ್ಲಿದ್ದ ಉಡುಪಿ ಮೂಲದ ಬಂಟ ಸಮುದಾಯದ ದಂಪತಿ ತೀವ್ರವಾಗಿ ಜಖಂಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದ ಶಾನ್ ಕನ್ಸ್‌ಟ್ರಕ್ಷನ್ ಆಂಡ್ ಲಾಜಿಸ್ಟಿಕ್ಸ್ ಸಂಸ್ಥೆ ಮಾಲಕ ಶರೀಫ್ ಎಂಬವರು ಆ ಕೂಡಲೇ ಈ ಅಪರಿಚಿತ ದಂಪತಿಯನ್ನುಎತ್ತಿ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಇಬ್ಬರೂ ಸಂಪೂರ್ಣ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೆ ಅವರ ಆರೈಕೆ ಮಾಡಿದ್ದರು. ನಂತರ ಶರೀಫ್ ರವರು ಘಟನೆಯನ್ನು ಮರೆತಿದ್ದರು.
ಆದರೆ, ನೆರವು ಪಡೆದ ದಂಪತಿ ಹಾಗೂ ಅವರ ಇಡೀ ಕುಟುಂಬ ಈ ಉಪಕಾರವನ್ನು ಮರೆಯಲಿಲ್ಲ.
ಕಳೆದ 25 ವರ್ಷಗಳಿಂದ ಶರೀಫ್ ಅವರಿಗೆ ಕರೆ ಮಾಡುತ್ತಾ ಆಮಂತ್ರಿಸುತ್ತಿದ್ದರು. ದಂಪತಿಯ ಒತ್ತಾಯಕ್ಕೆ ಓಗೊಟ್ಟು ತನ್ನ ಪರಿವಾರ ದೊಂದಿಗೆ ಭೇಟಿ ನೀಡಿದಾಗ, ಅವರಿಗೆ ನಂಬಲೇ ಅಸಾಧ್ಯ ಎಂಬಂತೆ ಆ ಹಿಂದು ಸಂಸಾರ ಅಲ್ಲಿಯ ದೊಡ್ಡ ಸಭಾ ಮಂದಿರದಲ್ಲಿ ಶರೀಫ್ ಅವರನ್ನು ವಿಜೃಂಭಣೆ ಯಿಂದ ಬರಮಾಡಿ, ಸಮಾರಂಭಕ್ಕೆ ತಮ್ಮ ಕುಟುಂಬ ಹಾಗೂ ಹಿತೈಷಿಗಳನ್ನು ಆಮಂತ್ರಿಸಿ ಅವರಿಗೆ ಅತ್ಯಂತ ಗೌರವ ಪೂರ್ವಕ ಸನ್ಮಾನ ನಡೆಸಿದರು. ಹಾಗೂ ನೆನಪಿನ ಕಾಣಿಕೆ ಗಳನ್ನು ನೀಡಿದರು. ಕಳೆದ ಜೂ.18ರಂದು ಕಿನ್ನಿಗೋಳಿಯ ಸಭಾಂಗಣವೊಂದರಲ್ಲಿ ಈ ಅಪೂರ್ವ ಸಮಾಗಮ ನಡೆದಿದೆ.
ಉಪಕಾರ ಮಾಡಿದವರನ್ನು ಮರುಕ್ಷಣವೇ ಮರೆತು ಬಿಡುವ ಈ ಕಾಲದಲ್ಲಿ ತಮ್ಮ ಜೀವ ಉಳಿಸಿದ ಈ ಆಪತ್ಭಾಂದವ ಬೇರೆ ಧರ್ಮದವನಾದರೂ 25 ವರ್ಷ ಸಂದರೂ ತಮ್ಮ ಕೃತಜ್ಞತೆ ಅರ್ಪಿಸಲು ಮರೆಯದ ಈ ಬಂಟ್ಸ್ ಸಂಸಾರಕ್ಕೆ, ಅವರ ಸೌಹಾರ್ದತೆಗೆ ಎಲ್ಲರೂ ತಲೆಬಾಗಲೇಬೇಕು. ಧರ್ಮದ ಹೆಸರಿನಲ್ಲಿ ಗಲಾಟೆ, ಸಂಘರ್ಷ ನಡೆಸುವವರಿಗೆ ಈ ಘಟನೆ ಆದರ್ಶವಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here