ತುಮಕೂರು: ಪತ್ನಿ, ಪುತ್ರಿ, ಅತ್ತೆ ಮತ್ತು ಮಾವನ ಕೊಲೆಗೆ ಸಂಚು ರೂಪಿಸಿ, ಅತ್ತೆ ಮಾವನನ್ನು ಕೊಲೆ ಮಾಡುವಲ್ಲಿ ಸಫಲನಾಗಿದ್ದ ಆರೋಪಿ ಹಾಗೂ ಆತನ ಸಹೋದರಗೆ ತುಮಕೂರಿನ ಆರನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್. ಕೃಷ್ಣಯ್ಯ ಅವರು ಕಠಿಣ ಜೀವಿತಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಬಿ.ಎಸ್. ಜಗದೀಶ್ ಮತ್ತು ಆತನ ಸಹೋದರ ಶಿವಕುಮಾರಸ್ವಾಮಿ ಬಿ.ಎಸ್. ಶಿಕ್ಷೆಗೊಳಗಾದವರು.
ಏನಿದು ಪ್ರಕರಣ?
ಬಿ.ಎಸ್. ಜಗದೀಶ್, ಶಿವರುದ್ರಪ್ಪ ಮತ್ತು ಶಾರದಮ್ಮ ದಂಪತಿಯ ಪುತ್ರಿ ವೇದಾ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ ಮೈತ್ರಿ ಎಂಬ ಮಗಳಿದ್ದಾಳೆ. ಕೌಟುಂಬಿಕ ಜಗಳದ ಕಾರಣ ಇವರೆಲ್ಲರನ್ನೂ ಮುಗಿಸಲು ಜಗದೀಶ್ ತನ್ನ ಸಹೋದರನಾದ ಶಿವಕುಮಾರಸ್ವಾಮಿ ಜೊತೆ ಸೇರಿ ಸಂಚು ರೂಪಿಸಿದ್ದ. ಇದರ ಭಾಗವಾಗಿ 2015ರ ಜು.25 ರಂದು ನ್ಯಾನೋ ಕಾರಿನಲ್ಲಿ ಎಲ್ಲರನ್ನೂ ಧರ್ಮಸ್ಥಳಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಂಡ ಈತ, ಅದರಂತೆ ಎಲ್ಲರನ್ನೂ ಕಾರಿನಲ್ಲಿ ಕುಳ್ಳಿರಿಸಿ ಹೊರಟಿದ್ದು, ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದ ಬಳಿ ಕಾರು ಕೆಟ್ಟು ಹೋಗಿದೆ ಎಂಬ ನೆಪ ಹೇಳಿ ರಸ್ತೆ ನಡುವೆ ಕಾರು ನಿಲ್ಲಿಸಿದ್ದಾನೆ. ಇದೇ ವೇಳೆಗೆ ಮೊದಲೇ ಯೋಜಿಸಿದಂತೆ ಶಿವಕುಮಾರ ಸ್ವಾಮಿ ಟಿಪ್ಪರ್ ಲಾರಿಯನ್ನು ತಂದು ದಾರಿಯಲ್ಲಿ ನಿಂತಿದ್ದ ಈ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತ ನಡೆಸಿದ್ದಾನೆ. ಘಟನೆಯಲ್ಲಿ ಅತ್ತೆ -ಮಾವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ಸಂದರ್ಭ ಜಗದೀಶ್ ಮಾಡಿದ ವ್ಯವಸ್ಥಿತ ಸಂಚು ಇದು ಎಂಬುದು ಪತ್ನಿ ವೇದಾಳಿಗೆ ತಿಳಿದಿದ್ದು, ಈ ವಿಚಾರ ಬಹಿರಂಗಪಡಿಸಿದಲ್ಲಿ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಲಾಗಿದೆ. ಈ ನಡುವೆ ಇದೊಂದು ಅಪಘಾತ ಎಂದು ಕುಣಿಗಲ್ ಠಾಣೆಯಲ್ಲಿ ಜಗದೀಶ್ ದೂರು ನೀಡಿದ್ದು, ತನಿಖೆ ಮುಂದುವರಿದಿತ್ತು.
ಇದಾದ ಬಳಿಕ 2015ರ ಆ.11 ರಂದು ಮತ್ತೆ ಮಾದನಾಯ್ಕನಹಳ್ಳಿ ಬಳಿ ವೇದಾ ಮತ್ತು ಮಗಳನ್ನು ಮುಗಿಸಲು ಸಂಚು ರೂಪಿಸಿದ ಈತ, ಸಂಚು ವಿಫಲಗೊಂಡು ಪೊಲೀಸರ ಬಲೆಗೆ ಬೀಳುತ್ತಾನೆ. ಅಂದಿನ ಕುಣಿಗಲ್ ಠಾಣೆಯ ಸಿಪಿಐ ಧರ್ಮೇಂದ್ರ ಕೇಸು ದಾಖಲಿಸಿ ವಿಚಾರಣೆ ನಡೆಸಿ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದದಾರು. ಸುದೀರ್ಘ ವಿಚಾರಣೆ ನಂತರ ಆರೋಪಿಗಳ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಕಟಗೊಂಡಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಆರ್.ಟಿ. ಅರುಣಾ ವಾದ ಮಂಡಿಸಿದ್ದರು.