ಮಂಗಳೂರು: ಅದೊಂದು ಅಪೂರ್ವ ಕಾರ್ಯಕ್ರಮ. ರಸ್ತೆಯಲ್ಲಿ ಜನರಿಗೆ ಕಲ್ಲೆಸೆದು ಓಡುತ್ತಿದ್ದ, ಅಂಗಡಿಗಳ ಗಾಜು ಪುಡಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಂಸ್ಥೆಯೊಂದರಿಂದ ಆರೈಕೆ ಪಡೆದು ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡ ಸುಂದರ ಘಳಿಗೆ.
ಈ ಘಟನೆಗೆ ಸಾಕ್ಷಿಯಾದ್ದು ಮಂಗಳೂರಿನ ಬಂದರು ಪೊಲೀಸ್ ಠಾಣೆ. ಮಾನಸಿಕ ಅಸ್ವಸ್ಥ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಲೆಮಾರಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಗುರುವಾರ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಗರದ ರಥಬೀದಿಯಲ್ಲಿ ಕಳೆದ ಮೂರು ವರ್ಷಗಳಿಂದ ಮಾನಸಿಕ ಅಸ್ವಸ್ಥ ಎಂದು ಕರೆಸಿಕೊಂಡ ವ್ಯಕ್ತಿಯೊಬ್ಬ ಜನರಿಗೆ ಕಲ್ಲೆಸೆದು ಓಡುತ್ತಿದ್ದ, ಅಂಗಡಿಗಳ ಮೇಲೆ ಕಲ್ಲೆಸೆದು ಗಾಜು ಪುಡಿ ಮಾಡುತ್ತಾ ಭೀತಿ ಸೃಷ್ಟಿಸುತ್ತಿದ್ದ ಇದೀಗ ಆತನ ಕುಟುಂಬವನ್ನು ಪತ್ತೆ ಹಚ್ಚಿ, ಆತನನ್ನು ಅವರೊಂದಿಗೆ ಕಳುಹಿಸಲಾಗಿದೆ. ಆತನ ಇರುವಿಕೆ ತಿಳಿದುಕೊಂಡ ದೂರದ ರಾಜಸ್ತಾನದ ಕುಟುಂಬದ ಸದಸ್ಯರು, ಆತನನ್ನು ಕರೆದೊಯ್ಯಲು ಮಂಗಳೂರಿಗೆ ಆಗಮಿಸಿದ್ದರು. ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಗೋವಿಂದ ರಾಜು ಅವರ ಸಮ್ಮುಖದಲ್ಲಿ ಯುವಕ ಮಹೇಶನನ್ನು ದಕ್ಷಿಣ ಕನ್ನಡ ಜಿಲ್ಲಾ ಆಂಜನಾ ಪಟೇಲ್ ಸಮಾಜದ ಪದಾಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.
ಮಾನಸಿಕ ಅಸ್ವಸ್ಥನೆಂದು ಕರೆಯಲ್ಪಟ್ಟ ವ್ಯಕ್ತಿ ತನ್ನ ಮನೆಗೆ ಸೇರುವಂತಾಗಿರುವುದು ಮುಲ್ಕಿ ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೊ ರಿಹ್ಯಾಬಿಲಿಟೇಶನ್ ಸೆಂಟರ್ನ ಆಸಿಫ್ ಅವರ ಪ್ರಯತ್ನದಿಂದ. ರಥಬೀದಿಯಲ್ಲಿದ್ದ ಆತನ ತೊಂದರೆಯಿಂದ ಜನರು ರೋಸಿ ಹೋಗಿದ್ದರು. ಅನೇಕ ಬಾರಿ ಪೊಲೀಸರಿಗೆ ದೂರು ನೀಡಿ, ಪೊಲೀಸರು ಆಗಮಿಸುವಾಗ ಕೈಗೆ ಸಿಗದೆ ಓಡಿ ಹೋಗುತ್ತಿದ್ದ. ಜನರು ಏನಾದರೂ ಕೊಟ್ಟರೆ ತಿನ್ನುತ್ತಾ ದೇವಸ್ಥಾನದ ಜಗಲಿಯಲ್ಲಿ ಮಲಗುತ್ತಿದ್ದ. ಜನರು ಆತನ ಫೋಟೊ, ವೀಡಿಯೊ ಮಾಡಿ ಆಗಾಗ ಪೊಲೀಸರಿಗೆ ಕಳುಹಿಸುತ್ತಿದ್ದರು.
ಈ ರಾಜುವಿನ ಅಸಲಿ ಹೆಸರು ಮಹೇಶ್. ಪದವಿ ಶಿಕ್ಷಣ ಪಡೆದು, ರೈಲ್ವೆಯಲ್ಲಿ ಕೆಲಸಕ್ಕೆ ಆಯ್ಕೆಯಾಗಿದ್ದ.ಯಾವುದೋ ಸಣ್ಣ ವಿಚಾರದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ. ಹಾಗೆ ಮೂರು ವರ್ಷದ ಹಿಂದೆ ಮುಂಬಯಿಯಿಂದ ನಾಪತ್ತೆಯಾಗಿದ್ದ. ಆತನನ್ನು ಹುಡುಕಲು ಮನೆಯವರು ಬಹಳಷ್ಟು ಪ್ರಯತ್ನ ಮಾಡಿದರೂ, ಸಫಲರಾಗಿರಲಿಲ್ಲ.
ಮಹೇಶ್ ಪಟೇಲ್ನ ತಂದೆ ಮತ್ತು ಸಹೋದರ ಮಂಗಳೂರಿಗೆ ಬರಲು ಹೊರಟಿದ್ದರು. ಮುಂಬಯಿ ತನಕ ವಿಮಾನದಲ್ಲಿ ಬಂದ ಅವರಿಗೆ ಮಂಗಳೂ ರಿಗೆ ಸಂಪರ್ಕ ವಿಮಾನ ಸಿಗದ ಹಿನ್ನೆಲೆಯಲ್ಲಿ ಕಾರ್ನಲ್ಲಿ ಹೊರಟಿದ್ದರು. ಈ ಮಧ್ಯೆ ಆಂಜನಾ ಪಟೇಲ್ ಸಮಾಜದ ಅಧ್ಯಕ್ಷ ಪಾನ್ಸಾರಾಮ್ ಪಟೇಲ್, ಮಾಜಿ ಅಧ್ಯಕ್ಷ ಮೂಲಾರಾಮ್ ಪಟೇಲ್ ಮತ್ತು ಸದಸ್ಯ ಜಿತೇಂದ್ರ ಪಟೇಲ್ ಕರೆದುಕೊಂಡು ಹೋದ ರು. ಆಸಿಫ್ ಆಪತ್ಬಾಂಧವ, ನಾರಾಯಣ ಮತ್ತಿತರರು ಮಹೇಶ್ನನ್ನು ಬೀಳ್ಕೊಟ್ಟರು.