ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ, ಕೇಂದ್ರ ಸಚಿವ ಸದಾನಂದ ಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, “ಅಪ್ಪ ಕ್ಷೇಮವಾಗಿದ್ದಾರೆ, ಆತಂಕಪಡುವ ಅಗತ್ಯವಿಲ್ಲ” ಎಂದು ಡಿವಿಎಸ್ ಪುತ್ರ ಕಾರ್ತಿಕ್ ತಿಳಿಸಿದ್ದಾರೆ.
ಡಿವಿಎಸ್ ಆರೋಗ್ಯದ ಕುರಿತಂತೆ ಅವರ ಪುತ್ರ ಕಾರ್ತಿಕ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಇದೇ ಮೊದಲ ಬಾರಿಗೆ ಅಪ್ಪನಿಗೆ ಲೋ ಶುಗರ್ ಆಗಿದೆ, ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆ ದಾಖಲಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಅಪ್ಪ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು ಕ್ಷೇಮವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಆತಂಕ ಪಡುವ ಯಾವುದೇ ಆಗತ್ಯವಿಲ್ಲ” ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ನಂತರ ಬಿಜೆಪಿ ಮುಖಂಡರು ರೆಸಿಡೆನ್ಸಿಗೆ ತೆರಳಿದ್ದ ವೇಳೆ ಕೇಂದ್ರ ಸಚಿವ ಸದಾನಂದ ಗೌಡರು ಮೂರ್ಚೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಪೊಲೀಸ್ ಎಸ್ಕಾರ್ಟ್ ವಾಹನದಲ್ಲಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗದಿಂದ ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.