Wednesday, August 10, 2022

Latest Posts

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ, ದಂಡ

ಚಿಕ್ಕಮಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನಗರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಬಳ್ಳಾರಿ ಜಿಲ್ಲೆ ಕೋಡ್ಲಿ ತಾಲ್ಲೂಕು ಮರಬನಹಳ್ಳಿ ಗ್ರಾಮದ ಅಂಜನಪ್ಪ ಎಂಬಾತ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.
ಆರೋಪಿ ಅಂಜನಪ್ಪ ಚಿಕ್ಕಮಗಳೂರು ತಾಲ್ಲೂಕಿನ ಚನ್ನಗೋಡನಹಳ್ಳಿ ಗ್ರಾಮದ ಬಗನೇಹೆದ್ದಾಳೆ ಎಸ್ಟೇಟಿನ ಕೂಲಿ ಕಾರ್ಮಿಕನಾಗಿದ್ದು ತೋಟದ ಕೂಲಿ ಲೈನಿನಲ್ಲೇ ವಾಸವಾಗಿದ್ದ. ಆತ ಪಕ್ಕದ ತೋಟದ ಕೂಲಿ ಲೈನ್‍ನಲ್ಲಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಬಾಲಕಿಯನ್ನು ಹಾಗೂ ಅವರ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ವೊಡ್ಡಿದ್ದ. ಇದರಿಂದ ಹೆದರಿದ ಬಾಲಕಿ ಮನೆಯವರಲ್ಲಿ ವಿಚಾರ ಮುಚ್ಚಿಟ್ಟಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ಅಂಜಿನಪ್ಪ ಒಂದು ವಾರದ ನಂತರ ಮತ್ತೆ ಆಕೆಯ ಮನೆಗೆ ಬಂದು ಅತ್ಯಾಚಾರ ಎಸಗಿದ್ದ. 2017 ರಲ್ಲಿ ಈಘಟನೆ ನಡೆದಿತ್ತು.
ಆ ನಂತರದಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಪೋಷಕರಿಗೆ ಸಂಶಯ ಉಂಟಾಗಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿಯು ಗರ್ಭವತಿಯಾಗಿರುವುದು ಗೊತ್ತಾಗಿತ್ತು. ಬಾಲಕಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಡಿ.ಎನ್.ಎ ವರದಿಯಂತೆ ಬಾಲಕಿ ಮತ್ತು ಆರೋಪಿ ಜನನವಾದ ಮಗುವಿನ ತಾಯಿ-ತಂದೆ ಎಂದು ರುಜುವಾತಾಗಿತ್ತು.
ಈ ಬಗ್ಗೆ ನೊಂದ ಬಾಲಕಿ 2018 ಜೂನ್ 16 ರಂದು ಮಲ್ಲಂದೂರು ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ತ್ವರಿತಗತಿ ವಿಶೇಷ-1 ನ್ಯಾಯಾಲಯ(ಪೊಕ್ಸೋ)ದ ನ್ಯಾಯಾಧೀಶರಾದ ವಿನಿತಾ ಪಿ ಶೆಟ್ಟಿ ಅವರು ರವರು ಆರೋಪಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ 2.10 ಲಕ್ಷ ರೂ. ದಂಡ ವಿಧಿಸಿ, ದಂಡದ ಹಣದ ಪೈಕಿ 2 ಲಕ್ಷ ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದು, ಆರೋಪಿ ದಂಡದ ಹಣ ನೀಡಲು ತಪ್ಪಿದಲ್ಲಿ ಒಂದು ವರ್ಷ ಸದಾ ಜೈಲು ಶಿಕ್ಷೆ ಅನುಭವಿಸತಕ್ಕದ್ದು ಎಂದು ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಬಿ.ಹೆಚ್.ಹರ್ಷ ವಾದ ಮಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss