ಮಡಿಕೇರಿ: ಕಳೆದ ಮೂರು ವರ್ಷಗಳಿಂದ ವೀರಾಜಪೇಟೆ ಪಟ್ಟಣ ಪಂಚಾಯ್ತಿಯು ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಹತ್ತು ಹಲವು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣವಾಗಿದೆ ಎಂದು ನಾಗರಿಕ ಸಮಿತಿಯ ಹಿರಿಯ ಸಂಚಾಲಕ ಹಾಗೂ ಸಮಾಜ ಸೇವಕ ಡಾ. ಐ.ಆರ್.ದುರ್ಗಾಪ್ರಸಾದ್ ಆರೋಪಿಸಿದ್ದಾರೆ
ನಗರದ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರು ದೃಢೀಕರಣ ಪತ್ರ ಮುಂತಾದ ಸಣ್ಣಪುಟ್ಟ ಕೆಲಸಗಳಿಗೂ ಪಂಚಾಯ್ತಿ ಕಛೇರಿಗೆ ದಿನಗಟ್ಟಲೆ ಓಡಾಡುವ ಪರಿಸ್ಥಿತಿ ಬಂದೊದಗಿದೆ. ಸಿಬ್ಬಂದಿಗಳು ವಿನಾ ಕಾರಣ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ. ನಗರದ ಮುಖ್ಯ ರಸ್ತೆಯೂ ಸೇರಿದಂತೆ ಎಲ್ಲಾ ರಸ್ತೆಗಳ ಬದಿಗಳು ನಿರ್ವಹಣೆಯಿಲ್ಲದೆ ಡಾಮರೀಕರಣವಿಲ್ಲದೆ ಗುಂಡಿ ಬಿದ್ದಿದ್ದು, ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಪಾರ್ಕಿಂಗ್ಗೆ ತೊಂದರೆಯಾಗುತ್ತಿದೆ. ಪ್ರಮುಖ ವಾರ್ಡ್ಗಳಾದ ನೆಹರುನಗರ ಹಾಗೂ ವಿದ್ಯಾನಗರಗಳ ಪ್ರವೇಶ ರಸ್ತೆಗಳು ತೀರಾ ಇಕ್ಕಟ್ಟಾಗಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡ ಸ್ಥಳೀಯ ಮೀನು ಮಾರುಕಟ್ಟೆ ಕಟ್ಟಡದ ಮಳಿಗೆಗಳು ತೀರಾ ಇಕ್ಕಟ್ಟಾಗಿದ್ದು, ಖರೀದಿದಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಾತ್ರವಲ್ಲ, ಈ ಕಾರಣದಿಂದ ನೈರ್ಮಲ್ಯವೂ ಇಲ್ಲದಾಗಿದೆ. ಕೊಳೆತ ಮೀನು ಮಾರಾಟವಾಗುತ್ತಿದೆಯೆಂದು ಈ ಮುಂಚೆಯೇ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಫಲಕಾರಿಯಾಗಿಲ್ಲ. ಕುರಿ, ಕೋಳಿ ಮಾಂಸ ನೇತು ಹಾಕಿ ಮಾರಾಟ ಬಾರದೆಂಬ ಸರಕಾರದ ಕಾನೂನನ್ನು ಬಹಿರಂಗವಾಗಿಯೇ ಮಾರಾಟಗಾರರು ಉಲ್ಲಂಘಿಸುತ್ತಿದ್ದಾರೆ ಎಂದು ದುರ್ಗಾಪ್ರಸಾದ್ ಆರೋಪಿಸಿದರು.
ಕೊರೋನಾ ಕಾಲದಲ್ಲಿ ಜನತೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ನೀರಿನ ತೆರಿಗೆ ಹಾಗೂ ಆಸ್ತಿ ತೆರಿಗೆಯನ್ನು ಏಕಾಏಕಿ ಏರಿಸಲಾಗಿದೆ. ಈ ಕ್ರಮವನ್ನು ನಾಗರಿಕ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸರಕಾರದೊಂದಿಗೆ ವ್ಯವಹರಿಸಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕೆಂದು ನಾಗರಿಕ ಸಮಿತಿ ಬಯಸುತ್ತದೆ ಎಂದು ಹೇಳಿದರು.
ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್, ಸದಸ್ಯರಾದ ಸೋಮ ಲೋಕನಾಥ್, ಎನ್.ಕೆ.ಅಬ್ದುಲ್ ಶರೀಫ್, ಅನಿತಾ ತೆರೇಜಾ ಲೋಬೋ, ಎಲ್.ಜಿ.ಅಶೋಕ್, ಎನ್.ಕೆ.ಗಣಪತಿ ಹಾಜರಿದ್ದರು. ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಶ್ರೀಧರ್ರವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.