Saturday, June 25, 2022

Latest Posts

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಅನಿವಾರ್ಯತೆ: ಕೊಡಗಿನಲ್ಲಿ ಲಾಕ್‌ಡೌನ್ ಅಲ್ಪ ಸಡಿಲಿಕೆ

ಮಡಿಕೇರಿ: ಕೋವಿಡ್-19 ನಿಗ್ರಹ ಸಂಬಂಧ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಮುಂಗಾರು ಸಮೀಪಿಸುತ್ತಿರುವುದರಿಂದ ಮಳೆಗಾಲಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣ, ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಂಡು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳ ಕುರಿತು ಕೆಲವು ವಿನಾಯಿತಿ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಹಲವು ನಾಗರಿಕರು ಹಾಗೂ ಜನಪ್ರತಿನಿಧಿಗಳು ಮಾಡಿದ ಮನವಿ ಮೇರೆಗೆ ಈ ಸಂಬಂಧ ಏ.೨೨ರಂದು ಸರಕಾರ ಸುತ್ತೋಲೆಯೊಂದನ್ನು ಹೊರಡಿಸಿದ್ದ ಅದರ ಅನ್ವಯ ಏ.23ರಿಂದ ಅನ್ವಯವಾಗುವಂತೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಅದರಂತೆ ತಡೆಗೋಡೆ, ಸೇತುವೆ, ರಸ್ತೆ ಕಾಮಗಾರಿಗಳು, ನೀರಾವರಿ ಯೋಜನೆಗಳು, ಕಟ್ಟಡ ಸೇರಿದಂತೆ ಎಲ್ಲಾ ವಾಣಿಜ್ಯ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದ್ದು, ಈ ಕಾರ್ಯಗಳಿಗೆ ಸ್ಥಳೀಯವಾಗಿ ಲಭ್ಯರಿರುವ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ. ಮುಂದಿನ ಆದೇಶದವರೆಗೆ ಹೊರ ಜಿಲ್ಲೆ / ರಾಜ್ಯದಿಂದ ಕಾರ್ಮಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕರಿಗೆ ಕಾಮಗಾರಿ ನಡೆಸುವ ಸ್ಥಳದ ಆಸುಪಾಸಿನಲ್ಲಿಯೇ ವಸತಿ ಸೌಕರ್ಯವನ್ನು ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಕಲ್ಪಿಸಬೇಕು. ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು ಇತ್ಯಾದಿಗಳ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ಅನುಷ್ಠಾನಾಧಿಕಾರಿ / ಗುತ್ತಿಗೆದಾರರು, ಕಾರ್ಮಿಕರು ಕೆಲಸದ ವೇಳೆ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಕಾಮಗಾರಿ ಪ್ರದೇಶ / ಸ್ಥಳದ ಹೊರತಾಗಿ ವಿನಾ ಕಾರಣ ಹೊರ ಪ್ರದೇಶದಲ್ಲಿ ತಿರುಗಾಡುವಂತಿಲ್ಲ.
ಒಂದೇ ಕಡೆ ಜಮಾವಣೆಗೊಳ್ಳುವುದು ಅಥವಾ ಗುಂಪುಗೂಡುವುದು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ರೀತಿಯಲ್ಲಿ ಅಸ್ವಸ್ಥತೆ ಇರುವ ಬಗ್ಗೆ ಕಂಡು ಬಂದಲ್ಲಿ ಅಥವಾ ಸಂಶಯವಿದ್ದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು.ಕಾಮಗಾರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಮೆಡಿಕಲ್ ಸ್ಕ್ರೀನಿಂಗ್ ನಡೆಸಬೇಕು. ಕಾಮಗಾರಿಗೆ ಅಗತ್ಯವಿರುವ ಕಚ್ಚಾ ಸಾಮಾಗ್ರಿಗಳ ಸಾಗಾಣಿಕೆಗೆ ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಪಡೆಯುವ ಅಗತ್ಯತೆ ಇಲ್ಲ. ಆದಾಗ್ಯೂ ಚಾಲಕ ಮತ್ತು ಒಬ್ಬ ಸಹಾಯಕರಿಗೆ ( ಒಟ್ಟು ಇಬ್ಬರು ಮಾತ್ರ) ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿ ನಡೆಸುವ ಸ್ಥಳದಲ್ಲಿ ಶುಚಿತ್ವ, ನೈರ್ಮಲ್ಯ ಕಾಪಾಡಬೇಕು ಮತ್ತು ಸೋಂಕು ನಿವಾರಕಗಳ ಸಿಂಪಡಿಸಬೇಕು. ಈ ಎಲ್ಲಾ ಅಂಶಗಳ ಪಾಲನೆ ಮಾಡುವುದು ಸಂಬಂಧಪಟ್ಟ ಕಾಮಗಾರಿ ನಿರ್ವಹಿಸುವ / ನಡೆಸುತ್ತಿರುವ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ಅವಕಾಶವನ್ನು ಜಿಲ್ಲೆಯ ಸಾರ್ವಜನಿಕ ಹಿತಾಸಕ್ತಿಯಿಂದ ಕಲ್ಪಿಸಲಾಗಿದೆ. ಉಲ್ಲಂಘನೆಯಾದಲ್ಲಿ ಅಥವಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಅನಾರೋಗ್ಯ ಪರಿಸ್ಥಿತಿ ಉಂಟಾದಲ್ಲಿ ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss