ಹೊಸದಿಗಂತ ವರದಿ,ವಿಜಯಪುರ:
ನಾವು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆ ಹಿಂಪಡೆದಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ವಿರುದ್ಧ ಮತ್ತೆ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಹಣ ಕೇಳಿದರೆ ಇಲ್ಲ ಎನ್ನುತ್ತಾರೆ. ಆದರೆ, ಹಿಂದೂಗಳನ್ನು ನಾಶ ಮಾಡುತ್ತಾನೆ ಎನ್ನುವ ಶಾಸಕ ಜಮೀರ್ ಅಹ್ಮದ್ ಗೆ ಕೋಟ್ಯಾಂತರ ಅನುದಾನವನ್ನು ಸಿಎಂ ಬಿ.ಎಸ್. ಯಡಿಯೂರಪ್ಪನವರು ನೀಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಅದಕ್ಕಾಗಿ ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ. ಅಲ್ಲದೇ, ಬರುವ ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಂತರ ಏನು ಮಾಡಬೇಕೆಂದು ವಿಚಾರ ಮಾಡುತ್ತೇನೆ ಎಂದರು.
ಸಚಿವ ಜಗದೀಶ ಶೆಟ್ಟರ್ ಅವರಂತೆ ನಾನೇನು ಕೀಳು ರಾಜಕಾರಣ ಮಾಡುವುದಿಲ್ಲ. ಸಿಎಂ ಆದ ಬಳಿಕ ಸಚಿವನಾಗಿಲ್ಲ. ಶೆಟ್ಟರ್ ಅಧಿಕಾರಕ್ಕಾಗಿ ಸಚಿವರಾಗುವ ಅವಶ್ಯಕತೆ ಇರಲಿಲ್ಲ ಎಂದು ಯತ್ನಾಳ ಗರಂ ಆದರು. ಸಚಿವ ಶೆಟ್ಟರ್ ಸುಮ್ಮನೆ ನನ್ನ ಬಗ್ಗೆ ಮಾತನಾಡಬಾರದು. ನನ್ನ ಬಳಿ ಬಹಳ ಜನರ ಇತಿಹಾಸವಿದೆ ಎಂದರು.