Thursday, July 7, 2022

Latest Posts

ಅಭಿವ್ಯಕ್ತಿ ಸ್ವಾತಂತ್ರ್ಯ’ ಎಡಪಂಥೀಯರಿಗೆ ಮಾತ್ರವೆ?

ಇತ್ತೀಚೆಗೆ ಮೈಸೂರಿನ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರು ಮೈಸೂರಿನ ಸಾಧ್ವಿ ಪತ್ರಿಕೆಯ ಕಾರ್ಯಕ್ರಮವೊಂದರಲ್ಲಿ “ನನ್ನ ಐದನೇ ತಲೆಮಾರಿನ ಅಜ್ಜನನ್ನು ಬಲತ್ಕಾರದಿಂದ ಮತಾಂತರ ಮಾಡಿದವ ಟಿಪ್ಪು ಸುಲ್ತಾನ್, ನಾನು ಆತನನ್ನು ಹೇಗೆ ಗೌರವಿಸಲಿ, ಹೇಗೆ ಜಯಂತಿ ಆಚರಿಸಲಿ, ಅಲ್ಲದೆ ‘ಟಿಪ್ಪು’ ಹೆಸರು ಕೇಳಿದಾಗ ಥೂ ಅನ್ನಿಸಿಬಿಡುತಿತ್ತು. ಆದರೆ ಮೈಸೂರಿಗೆ ಬಂದ ಆರಂಭದಲ್ಲಿ ಟಿಪ್ಪು ಬಗ್ಗೆ ಬಹಳ ಮಂದಿಗೆ ಹೆಮ್ಮೆ ಇರುವುದು ತಿಳಿಯಿತು” ಎಂದು ಹೇಳಿದ್ದರು. ಈ ವಿಷಯ ಈಗ ದೊಡ್ಡ ರಾದ್ಧಾಂತವಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರವರನ್ನು ವಜಾಗೊಳಿಸಬೇಕೆಂದು ಎಡಪಂಥೀಯ ಬುದ್ಧಿಜೀವಿಗಳು ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ. ಅಂದರೆ ಈ ದೇಶದಲ್ಲಿ ಎಡಪಂಥೀಯರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದು. ಉಳಿದವರಿಗೆ, ಅದರಲ್ಲೂ ಬಲಪಂಥೀಯರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಇಲ್ಲ ಎಂದು ಎಡಪಂಥೀಯರೇ ತೀರ್ಮಾನಿಸಿದಂತಿದೆ.

ಈ ದೇಶದಲ್ಲಿ, ರಾಜ್ಯದಲ್ಲಿ ಟಿಪ್ಪು ಬಗ್ಗೆ ಅನೇಕ ವರ್ಷಗಳಿಂದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಎಡಪಂಥಿಯರು ಯಾರೋ ಎಡಬಿಡಂಗಿಗಳು ಬರೆದ ಪುಸ್ತಕವನ್ನು ಓದಿ ಟಿಪ್ಪುವಿನ ಪರವಾಗಿ ಮಾತನಾಡಿದರೆ, ಅಡ್ಡಂಡ ಕಾರ್ಯಪ್ಪನವರಿಗೆ ಟಿಪ್ಪುವಿನ ಬಲತ್ಕಾರದ ಮತಾಂತರದ ನಿಜವಾದ ಅನುಭವ ಅವರ ಕುಟುಂಬಕ್ಕೆ ಪ್ರತ್ಯಕ್ಷವಾಗಿ ಆಗಿದೆ. ಆ ನೋವನ್ನು ಅವರು ಹೊರಗೆ ಹಾಕಿದ್ದಾರೆ, ಈ ಬಗ್ಗೆ ಅವರು “ಟಿಪ್ಪು ಮತ್ತು ಕೊಡವರು” ಎಂಬ ಪುಸ್ತಕದಲ್ಲಿ ಸವಿವರವಾಗಿ ಬರೆದಿದ್ದಾರೆ ಮತ್ತು ಅವರು “ನಾನು ಟಿಪ್ಪುವಿನ ಬಗ್ಗೆ ಮಾತನಾಡಿದ ಮಾತ್ರಕ್ಕೆ ನನ್ನ ಜಾತ್ಯತೀತ ನಿಲುವು ಬದಲಾಗುವುದಿಲ್ಲ. ಅದೇನಿದ್ದರೂ ಅಚಲ. ನನ್ನ ಬದ್ಧತೆ ಏನಿದ್ದರೂ ‘ರಂಗಭೂಮಿ’, ಅದರ ಹೊರತಾಗಿ ನಾನು ಭ್ರಷ್ಟನಾಗಲಾರೆ. ಗಾಂಧಿ ತತ್ವವೇ ನನ್ನ ಗುರಿ, ‘ನನ್ನದು ನೇರ ನುಡಿಯ ಸ್ವಭಾವ, ಆದರೆ ನನ್ನ ಖಾಸಗಿ ಅಭಿಪ್ರಾಯ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು” ಎಂದು ಹೇಳಿದ್ದಾರೆ.

ಇಷ್ಟರವರೆಗೆ ರಂಗಾಯಣ ಎಡಪಂಥಿಯರಿಂದಲೇ ತುಂಬಿ ಅಲ್ಲಿ ಡೋಂಗಿ ಜಾತ್ಯತೀತತೆಯ ಹೆಸರಿನಲ್ಲಿ ಈ ದೇಶದ ಅಂತಃಸತ್ವವನ್ನು ಅಂದರೆ ಹಿಂದುತ್ವವನ್ನು ಹೀಗಳೆಯುವುದು, ಅವಮಾನಿಸುವುದು, ಕಮ್ಯುನಿಸ್ಟ್ ಸಿದ್ಧಾಂತಗಳನ್ನೇ ಪ್ರತಿಪಾದಿಸುವ ನಾಟಕಗಳು, ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಗ ರಂಗಾಯಣ ‘ಕಮ್ಯುನಿಸ್ಟಾಯಣ’ವಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಒಬ್ಬ ಪ್ರತಿಭಾವಂತ ‘ಸೃಷ್ಟಿ ಕೊಡಗು’ ರಂಗಕರ್ಮಿ ಅಡ್ಡಂಡ ಕಾರ್ಯಪ್ಪನವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಕ ಮಾಡಿದಾಗ ಅದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಈ ದೇಶದ ಪ್ರಧಾನಿಯನ್ನು ಬಾಯಿಗೆ ಬಂದಂತೆ ಬೈಯುವ ಈ ಎಡಬಿಡಂಗಿಗಳಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದೆ? ಇವರು ಏನೂ ಬೇಕಾದರೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಹೇಳಬಹುದು. ಆದರೆ ಬೇರೆಯವರು ಯಾವುದನ್ನೂ, ಯಾರನ್ನೂ ಟೀಕಿಸಬಾರದು. ಹೇಗಿದೆ ಇವರ ವರಸೆ?

ಈ ದೇಶದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ‘ಸಂವಿಧಾನದ ಕಗ್ಗೊಲೆ’ ನಡೆದಾಗ ಇವರಿಗೆ ಡಾ.ಬಿ.ಆರ್.ಅಂಬೇಡ್ಕರ್‌ ರ ನೆನಪಾಗಲಿಲ್ಲ. ಸ್ವಾಯುಕ್ತ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ತಮ್ಮ ಅಡ್ಡಗಳನ್ನಾಗಿ ಎಷ್ಟೋ ವರ್ಷಗಳಿಂದ ಮಾಡಿಕೊಂಡು ಅಲ್ಲಿನ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯೆಂದು ತಿಳಿದು, ಅಲ್ಲಿಗೆ ಸರ್ಕಾರದಿಂದ ಬರುವಂತಹ ಕೋಟಿಗಟ್ಟಲೆ ಅನುದಾನಗಳನ್ನು ತಿಂದು ತೇಗಿದ ಇವರಿಗೆ ಈಗ ಸ್ವಾಯುಕ್ತ ಸಂಸ್ಥೆಗಳ ಬಗ್ಗೆ ಕನಿಕರ ಮೂಡುತ್ತಿರುವುದು ಸೋಜಿಗ. ಕಳೆದ 70 ವರ್ಷಗಳಿಂದ ಈ ದೇಶದ ಚರಿತ್ರೆಯನ್ನು ತಿರುಚಿ ಪಠ್ಯಪುಸ್ತಕಗಳನ್ನು ತಮ್ಮ ಮೂಗಿನ ನೇರಕ್ಕೆ ಬರೆದು ದೇಶದ್ರೋಹಿಗಳಿಗೆ, ಭಯೋತ್ಪಾದಕರಿಗೆ ಬಹುಪಾರಕ್ ಹೇಳಿ ಜೆ.ಎನ್‌.ಯು ಮುಂತಾದ ವಿವಿಗಳಲ್ಲಿ ತುಕ್ಡೆ ಗ್ಯಾಂಗ್‌ ಗಳನ್ನು ತಯಾರು ಮಾಡಿ, ವಿದ್ಯಾರ್ಥಿಗಳ ದಾರಿ ತಪ್ಪಿಸಿದ ಇವರಿಗೆ ಈಗ ಹೊಸ ಶಿಕ್ಷಣ ನೀತಿಯ ಬಗ್ಗೆ ಅಸಹನೆ ಮೂಡುತ್ತಿದೆ. ಇವರಿಗೆ ಹೊಸ ಶಿಕ್ಷಣ ನೀತಿಯ ಬಗ್ಗೆ, ಪಠ್ಯಗಳನ್ನು ಬದಲಾಯಿಸುವ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ?

ಕಮ್ಯುನಿಸ್ಟರೇ, ಈ ದೇಶವು ‘ಹಿಂದು ರಾಷ್ಟ್ರವೇ ಹೌದು’ ಎಂದು ಜಗತ್ತೇ ಹೇಳುತ್ತಿದೆ. ಇಲ್ಲಿರುವವರು ಎಲ್ಲರೂ ಹಿಂದುಗಳೇ. ಅವರು ಯಾವ ಮತ ಧರ್ಮಗಳನ್ನೂ ಆಚರಣೆ ಮಾಡಲಿ, ಹಿಂದುಸ್ತಾನದಲ್ಲಿರುವವರೆಲ್ಲರೂ ಹಿಂದುಗಳೇ ಆಗಿರುವಾಗ ‘ಹಿಂದು ರಾಷ್ಟ್ರ’ ಎನ್ನುವಂತದ್ದು ನಿಮಗೆ ವಿಷಬೀಜವಾಗಿರಬಹುದು. ಯಾಕೆಂದರೆ ನೀವು ಈ ದೇಶವನ್ನು ‘ಕಮ್ಯುನಿಸ್ಟ್’ ದೇಶವನ್ನಾಗಿ ಮಾಡಲು ಹೊರಟವರು. ಇಂದು ಹಿಂದುತ್ವ ಸಿದ್ಧಾಂತಕ್ಕೆ ಎಲ್ಲಾ ಕಡೆ ಮನ್ನಣೆ ಸಿಕ್ಕಿದೆ. ನಿಮಗೆ ಕೇಂದ್ರ ಸರ್ಕಾರ ಮಾಡುವ ಎಲ್ಲಾ ಕೆಲಸಗಳು ‘ಕಮ್ಯುನಿಸ್ಟ್ ವಿರೋಧಿ’ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ. ಇಷ್ಟರವರೆಗೆ ಅಕಾಡೆಮಿಗಳಲ್ಲಿ, ರಂಗಾಯಣ ಮುಂತಾದ ಸಂಸ್ಥೆಗಳಲ್ಲಿ ಗಟ್ಟಿಯಾಗಿ ತಳವೂರಿದ ನಿಮ್ಮಂತಹವರನ್ನು ಈಗಿನ ಸರ್ಕಾರ ಎತ್ತಂಗಡಿ ಮಾಡಿದ್ದು, ನಿಮಗೆ ಸಹಿಸಲು ಆಗುತ್ತಿಲ್ಲ. ಸರ್ಕಾರದಿಂದ ಬಿಟ್ಟಿ ಸಿಗುತ್ತಿದ್ದ ಅನುದಾನ, ಪ್ರಶಸ್ತಿಗಳಿಗೆ ನಿಯಂತ್ರಣ ಹಾಕಲಾಗಿದೆ. ವಿದೇಶಗಳಿಂದ 120 ಕೋಟಿಗಳನ್ನು ಪಡೆದು ಈ ದೇಶದಲ್ಲಿ ಪೌರತ್ವ ಕಾಯ್ದೆಯ (ಸಿಎಎ) ವಿರುದ್ಧ ಹೋರಾಟ ಮಾಡಿ, ದೇಶಕ್ಕೆ ಬೆಂಕಿ ಹಚ್ಚಲು ನೀವು ಯತ್ನಿಸುತ್ತಿರುವುದು ಜಗಜ್ಜಾಹೀರಾಗಿದೆ.

ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಮಣ್ಣು ಮುಕ್ಕಿಸಿ ನಕಲಿ ಗಾಂಧಿಗಳು ಮೆರೆದಾಗ ನೀವು ಅವರ ತಾಳಕ್ಕೆ ತಕ್ಕಂತೆ ಕುಣಿದಿಲ್ಲವೆ? ಈಗ ನಿಮಗೆ ಗಾಂಧೀಜಿಯವರ ಬಗ್ಗೆ ಭಕ್ತಿ ಉಕ್ಕಿ ಹರಿಯುತ್ತಿದೆ. ಗೋಡ್ಸೆ ಗಾಂಧೀಜಿಯ ದೇಹವನ್ನು ಕೊಂದ. ಆದರೆ, ನೀವು ಮಹಾತ್ಮಾ ಗಾಂಧಿಯವರ ತತ್ವ ಸಿದ್ಧಾಂತಗಳಾದ ಸತ್ಯ, ಅಹಿಂಸೆಗಳಿಗೆ ಎಳ್ಳುನೀರು ಬಿಟ್ಟವರಲ್ಲವೇ? ಪಶ್ಚಿಮ ಬಂಗಾಳದಲ್ಲಿ 25 ವರ್ಷಗಳ ಕಾಲ, ಕೇರಳದಲ್ಲಿ ಈಗಲೂ ರಾಜಕೀಯ ವಿರೋಧಿಗಳನ್ನು ಕೊಚ್ಚಿ ಕೊಲ್ಲುತ್ತಿರುವ ನಿಮ್ಮ ನೀತಿ ಇಡೀ ದೇಶಕ್ಕೆ ಗೊತ್ತಿದೆ.

‘ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರನ್ನು ವಜಾಗೊಳಿಸದಿದ್ದರೆ ಹೋರಾಟ ಮಾಡುವುದಾಗಿ’ ರಂಗಾಯಣದ ಮಾಜಿ ನಿರ್ದೇಶಕರೊಬ್ಬರು ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ನೀವು ಧಮ್ಕಿ ಹಾಕಿದ ಕೂಡಲೆ ಅಡ್ಡಂಡ ಕಾರ್ಯಪ್ಪನವರನ್ನು ವಜಾಗೊಳಿಸಲು ಕರ್ನಾಟಕದಲ್ಲಿರುವುದು ಕೇರಳದಂತಹ ಕಮ್ಯನಿಸ್ಟ್ ಸರ್ಕಾರವಲ್ಲ. ಅಡ್ಡಂಡ ಕಾರ್ಯಪ್ಪನವರ ಕಾರ್ಯವೈಖರಿ ಸರಿಯಿಲ್ಲ ಅಂತಾದರೆ ಅವರನ್ನು ವಿರೋಧಿಸಿ, ಪ್ರತಿಭಟಿಸಿ. ಅದನ್ನು ಬಿಟ್ಟು ಅವರನ್ನು ವಜಾಗೊಳಿಸಲು ನೀವು ಯಾರು? ಅವರಿಗೂ ನಿಮ್ಮಂತೆಯೇ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಅವರು ಏನು ಹೇಳುತ್ತಾರೆ ಎನ್ನುವುದಕ್ಕಿಂತ, ಅವರು ರಂಗಾಯಣದಲ್ಲಿ ಏನು ಮಾಡುತ್ತಾರೆ ಎನ್ನುವುದು ಮುಖ್ಯ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಡ್ಡಂಡ ಕಾರ್ಯಪ್ಪನವರ ನೇತೃತ್ವದಲ್ಲಿ ನಡೆಯಬಾರದೆಂದು ಹೇಳಲು ನಿಮಗೇನು ಹಕ್ಕಿದೆ? ಬಹುರೂಪಿ ನಾಟಕೋತ್ಸವ ಈಗಾಗಲೇ ಅತ್ಯಂತ ಯಶಸ್ವಿಯಾಗಿ ನಡೆದು ದಾಖಲೆ ಮಾಡಿದೆ. ಎಡಪಂಥಿಯವರ ನೇತೃತ್ವದಲ್ಲಿ ಬಹುರೂಪಿ ನಾಟಕೋತ್ಸವ ನಡೆದಾಗ ಬಲಪಂಥೀಯವರು ಎಂದಾದರೂ ಪ್ರತಿಭಟನೆ ಮಾಡಿದ್ದಾರೆಯೇ?

ಇತ್ತೀಚೆಗೆ ಒಬ್ಬ ಎಡಪಂಥೀಯ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಿಎಎ ವಿರೋಧಿ ಹೋರಾಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ “ಪಾಕಿಸ್ತಾನ ಜಿಂದಾಬಾದ್” ಎಂಬ ರಾಷ್ಟ್ರದ್ರೋಹಿ ಹೇಳಿಕೆ ನೀಡಿ ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರದ್ರೋಹದ ಹೇಳಿಕೆ ನೀಡಿದರೆ ಇನ್ನು ಮುಂದೆ ಜೈಲೇ ಗತಿ ಎಂಬುದು ಎಲ್ಲರಿಗೂ ಅರಿವಾಗಲಿ.

-ಡಾ. ಆನಂದ್ ಕಾರ್ಲ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss