Tuesday, June 28, 2022

Latest Posts

ಅಮವಾಸ್ಯೆಯ ಮಧ್ಯ ರಾತ್ರಿ ಹಾಸ್ಟೆಲ್‌ನಲ್ಲಿ ದೆವ್ವವನ್ನು ನೋಡಿದ್ದೆ!! ಬಿಳಿಯ ಆಕೃತಿ ನನ್ನ ಎದುರೇ ನಿಂತಿತ್ತು !! ಧೈರ್ಯ ಇರುವವರು ಈ ಸ್ಟೋರಿ ಓದಿ..

ರಾತ್ರಿಯ ಎರಡನೇ ಜಾವ ಪ್ರಾರಂಭವಾಗಿತ್ತು. ಇಡೀ ಹಾಸ್ಟೆಲ್ ಮೌನವನ್ನು ಹೊದ್ದು ಮಲಗಿತ್ತು. ಅಂದು ಆಕಾಶದಲ್ಲಿ ಹದಿನಾಲ್ಕನೇಯ ಚಂದಿರ ಮೂಡಿದ್ದ. ಅಮವಾಸ್ಯೆಯಂತ ಕತ್ತಲಲ್ಲೂ ಹತ್ತಿಯಂತ ಹಿಮ ಬೀಳುತ್ತಿತ್ತು. ನಾನು ರೂಮಿನ ಒಂದು ಮೂಲೆಯಲ್ಲಿ ಕೂತು ತೂಕಡಿಸುತ್ತಾ ಅಸೈನ್‌ಮೆಂಟ್ ಬರೆಯುತ್ತಿದೆ. ಆಗ ಸುಮಾರು ಒಂದು ಗಂಟೆ. ಇದ್ದಕ್ಕಿದಂತ ಕರೆಂಟ್ ಹೋಯಿತು.

ಕತ್ತಲಲ್ಲೆ ಕೈಯಾಡಿಸಿ ನನ್ನ ಜಂಗಮನನ್ನು ಹುಡುಕಿದೆ. ಅವನು ಹೊಟ್ಟೆಗಿಲ್ಲದೆ ಮಲಗಿದ್ದ. ಕರೆಂಟ್ ಬರಬಹುದೆಂಬ ನಿರೀಕ್ಷೆಯಲ್ಲಿ ಅಲ್ಲೇ ಕಣ್ಣುಮುಚ್ಚಿ ಕುಳಿತೆ. ಯಾವುದೇ ಸದ್ದುಗದ್ದಲವಿಲ್ಲದೇ ಇಡೀ ಪೇಟೆ ಸುಖವಾಗಿ ನಿದ್ರಿಸುತ್ತಿತ್ತು. ಎಲ್ಲೆಡೆ ಪ್ರಚಂಡ ಮೌನ. ಎಷ್ಟು ಹೊತ್ತಾದರೂ ಕರೆಂಟ್ ಬರುವ ಸೂಚನೆ ಕಾಣಲಿಲ್ಲ. ಮಲಗಲೆದ್ದು ಹೊರಟೆ. ಆದರೆ ಯಾವುದೋ ದಿಕ್ಕಿನಲ್ಲಿ ಬೀಸಿ ಬಂದ ಗಾಳಿಗೆ ಬಡಿದುಕೊಂಡ ಕಿಟಕಿಯ ಶಬ್ಧ ನನ್ನ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಒಂದೇ ಒಂದು ಹೆಜ್ಜೆಯೂ ಕಿತ್ತಿಡಲಾಗಲಿಲ್ಲ! ಅಲ್ಲಿಯೇ ಕುಸಿದು ಕುಳಿತೆ. ಕಣ್ ರೆಪ್ಪೆಗಳು ಒಂದಕ್ಕೊಂದು ಬಡಿದುಕೊಳ್ಳುವುದೇ ಮರೆತು ಬಿಟ್ಟಿತು!

ಬೆನ್ನ ಹುರಿಯಲ್ಲಿ ಹಾವು ಸರಿದಾಡಿದಂತಹ ಅನುಭವ. ನನಗೇನೋ ಆಗುತ್ತಿದೆ ಅನ್ನಿಸಿತು. ಆದರೆ ಕೂಗಲು ಸ್ವರ ಆಚೆಯೇ ಬರಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿಯೇ ಕುತ್ತಿಗೆಯ ರೋಮಗಳು ನಿಮಿರಿ ನಿಂತಿದ್ದವು. ಅರ್ಥವಾಗದ ದುಗುಡು, ಎದೆಯಲ್ಲಿ ಚಂಡಮಾರುತವೆದ್ದಿತು. ಮೈ ಕೊರೆಯುವ ಚಳಿಯಲ್ಲಿಯೂ ಮೈಯೆಲ್ಲಾ ಬೆವೆತು ಬಿಟ್ಟಿತು. ಕೈಯಲ್ಲಿದ್ದ ಸ್ಕೇಲು ಅಚಾನಕ್ಕಾಗಿ ಕೆಳಗೆ ಬಿದ್ದು ಕೋಣೆಯನ್ನೆಲ್ಲಾ ಭಯಂಕರವಾಗಿ ಠಣಗುಡಿಸಿತು. ಬಗ್ಗಿ ಅದನ್ನು ತೆಗೆದುಕೊಳ್ಳುವ ಧೈರ್ಯ ಬರಲಿಲ್ಲ. ಮೈಯೆಲ್ಲ ಮರಗೆಟ್ಟಿದ ಅನುಭವ. ಯಾರೋ ನನ್ನನ್ನು ಸವರಿಕೊಂಡು ಪಕ್ಕಕ್ಕೆ ಹೋದಂತಾಯಿತು.

ಬಾಯಿಗೆ ಬಂದ ದೇವರನ್ನೆಲ್ಲ ನೆನೆದುಕೊಂಡೆ. ಅಜ್ಜ ಹೇಳಿಕೊಟ್ಟ ಶ್ಲೋಕವನ್ನೆಲ್ಲ ಹೇಳಿದೆ. ಸ್ವಲ್ಪ ಧೈರ್ಯ ಮಾಡಿ ಮೊಣಕಾಲೂರಿ ಕಿಟಕಿಯಿಂದ ಹಾಸ್ಟೆಲ್ ಅಂಗಳವನ್ನೊಮ್ಮೆ ನೋಡಿದೆ. ಎಲ್ಲಿಂದಲೋ ಬರುತ್ತಿದ್ದ ವಿಪರೀತ ಹೊಗೆ ಹಾಸ್ಟೆಲ್ ಸುತ್ತುತ್ತಿತ್ತು. ದೂರದಲ್ಲೊಂದು ಅಸ್ವಷ್ಟ ಬಿಳಿ ಆಕೃತಿ ನಿಂತಂತೆ ಕಂಡಿತು. ಹೇಳಲಾಗದ ಭಯ ಎದೆ ಬಡಿತವನ್ನು ಹೆಚ್ಚಿಸಿತು. ನನ್ನ ಉಸಿರಿನ ಏರಿಳಿತ ನನಗೇ ಕೇಳುತ್ತಿತ್ತು.

ಏನು ಮಾಡಬೇಕು ಎಂಬುದು ಗೊತ್ತಾಗದೇ ಕಂಗಾಲಾದೆ. ರೋಮಗಳೆಲ್ಲ ಬೆಚ್ಚಿ ಬಿದ್ದಿದ್ದವು. ಪಕ್ಕನೆ ಬಂದು ಹೋದ ಕರೆಂಟ್ ಮತ್ತಷ್ಟು ಧೈರ್ಯ ಕೆಡಿಸಿತು. ಫ್ಯಾನ್ ಒಮ್ಮೆ ತಿರುಗಿ ಸ್ತಬ್ಧವಾದರೂ ಅದರ ಸೌಂಡ್ ಕಡಿಮೆ ಆಗಿರಲಿಲ್ಲ. ಎಲ್ಲೋ ಪಿಸುಗುಟ್ಟುವ ಧ್ವನಿ ಕೇಳಿಸುತ್ತಿತ್ತು. ಈಶಾನ್ಯ ದಿಕ್ಕಿನಲ್ಲೆಲ್ಲೋ ನಾಯಿ ಊಳಿಡುತ್ತಿತ್ತು. ಎಷ್ಟೇ ಬೇಡವೆಂದರೂ ಇದು ದುಷ್ಟ ಶಕ್ತಿಗಳ ಅಟ್ಟಹಾಸವೇ ಎಂದು ಮನಸ್ಸು ನಿರ್ಧರಿಸಿ ಬಿಟ್ಟಿತ್ತು.

“ಈ ಹಾಸ್ಟೆಲ್‌ನಲ್ಲಿ ಹತ್ತು ವರ್ಷಗಳ ಹಿಂದೆ ಒಂದು ಹುಡುಗಿಯ ಕೊಲೆ ಆಗಿತ್ತಂತೆ. ಈಗ ಅವಳು ಅಮವಾಸ್ಯೆಯ ದಿನಗಳಲ್ಲಿ ಕಾಣಿಸಿಕೊಳ್ಳುತ್ತಾಳಂತೆ” ಎಂದು ಹೇಳಿದ ವಿಷಯ ಯಾವ ಮೂಲೆಯಲ್ಲಿ ಅಡಗಿತ್ತೋ! ಒಮ್ಮೆಯೇ ನೆನಪಾಗಿ ಮೈ ಪರಚಿಕೊಳ್ಳುವಂತಾಯಿತು. ಅವತ್ತು ಈ ವಿಷಯವನ್ನು ಕೇಳಿ “ಸಿಲ್ಲಿ” ಎಂದು ನಕ್ಕಿದ್ದೆ. ಆದರೆ ಇವತ್ತೇಕೋ ಅದು ನಿಜವೆನ್ನಿಸಿತು.
ಅಷ್ಟೊತ್ತಿಗಾಗಲೇ ನಿಶೆಯು ಮೂರನೇ ಜಾವಕ್ಕೆ ಕಾಲಿಡುತ್ತಿತ್ತು. ಗರಿ ಮುದುರಿಕೊಂಡ ಗುಬ್ಬಿಯಂತೆ ಹೆದರಿ ಕುಳಿತುಕೊಂಡಿದ್ದೆ. ದು:ಖವೆಲ್ಲ ಗಂಟಲ್ಲಿಯೇ ಪಾಚಿಕಟ್ಟಿತ್ತು.

ಯಾರೋ ನಾನು ಕುಳಿತಲ್ಲಿಯೇ ಬರುತ್ತಿದ್ದಂತಾಯಿತು. ಏನು ಮಾಡಬೇಕೆಂದು ತೋಚದೆ ಗಟ್ಟಿಯಾಗಿ ಕಣ್ಮುಚ್ಚಿ, ಕಿವಿಗಳೆರಡನ್ನು ಒತ್ತಿ ಹಿಡಿದು ದೊಡ್ಡದಾಗಿ ಕಿರುಚಿದೆ. ಮಲಗಿದ್ದ ನನ್ನ ಗೆಳತಿ ಬೆಚ್ಚಿಬಿದ್ದು ಒಮ್ಮೆಗೆ ಎದ್ದು ಕುಳಿತಳು. ಅವಳು ಏಳುವುದಕ್ಕೂ ಕರೆಂಟ್ ಬರುವುದಕ್ಕೂ ಸರಿಹೋಯಿತು. ಹೆದರಿ ಕಣ್ಣೀರಿಡುತ್ತಾ ಕುಳಿತಿದ್ದ ನನ್ನನ್ನು ನೋಡಿ “ಏನಾಯಿತೆ” ಎಂದು ವಿಚಾರಿಸಿದಳು. ಪುಟ್ಟ ಹುಡುಗಿಯಂತೆ ಅಳುತ್ತಾ ಎಲ್ಲವನ್ನೂ ಹೇಳಿದೆ.

ವಿಷಯ ಕೇಳಿ ಬಿದ್ದು ಬಿದ್ದು ನಕ್ಕಿದಳು. ಅವಳ ಮೇಲೆ ಕೋಪ ಬಂದರೂ ಸುಮ್ಮನೆ ಕೂತಿದ್ದೆ. ಅವಳು ಮುಂದುವರೆಸಿ ಹೇಳಿದಳು. ನಮ್ಮ ಹಾಸ್ಟೆಲ್ ಪಕ್ಕದಲ್ಲಿಯೇ ’ಫೈರ್ ಕ್ಯಾಂಪ್’ ನಡೆಯುತ್ತಿದೆ. ಅಲ್ಲಿಂದ ಬರುತ್ತಿದ್ದಿದ್ದು ಹೊಗೆ. ಅವರ ಪಿಸುಗುಡುವ ಧ್ವನಿಯೇ ನಿನಗೆ ಕೇಳಿಸಿದ್ದು. ನೀನು ಅಂಗಳದಲ್ಲಿ ಕಂಡ ಬಿಳಿ ಆಕೃತಿ ನಾನೇ ಬೆಳಿಗ್ಗೆ ಒಣಗಿಸಿದ್ದ ನನ್ನ ಬಿಳಿ ದುಪ್ಪಟ್ಟ. ಏನ್ನನ್ನೋ ನೋಡಿ ನಾಯಿ ಬೊಗಳಿರುತ್ತದೆ, ಜೋರಾಗಿ ಬಿಸಿದ ಗಾಳಿಗೆ ಕಿಟಕಿ ಸದ್ದು ಮಾಡಿದೆ. ಪ್ರತಿ ದಿನ ರಾತ್ರಿ ಪವರ್ ಕಟ್ ಅಂತ ಕರೆಂಟ್ ತೆಗೆಯುತ್ತಿದ್ದಾರೆ. ಮನಸ್ಸು ಒಮ್ಮೆ ಹೆದರಿದರೆ ಎಲ್ಲ ಶಬ್ಧವೂ ವಿಚಿತ್ರವಾಗಿಯೇ ಕೇಳುತ್ತದೆ.

ಪಾಸಿಟಿವ್ ಆಗಿ ಯೋಚನೆ ಮಾಡು, ಯಾವುದೇ ವಿಷಯವಾದರೂ ನಾವು ಹೆದರಿದರೆ ಅವು ನಮ್ಮನ್ನು ಮತ್ತಷ್ಟು ಹೆದರಿಸುತ್ತವೆ. ಇಂತಹದನ್ನೆಲ್ಲ ನಂಬಬೇಡ. ಜಗತ್ತು ತುಂಬಾ ಮುಂದುವರೆದಿದೆ. ಎಲ್ಲಿ ಆಯಸ್ಕಾಂತೀಯ ಶಕ್ತಿ ಹೆಚ್ಚಿರುತ್ತದೆಯೋ, ಎಲ್ಲಿ ವಿದ್ಯುತ್ಕಾಂತೀಯ ಬಲವಿರುತ್ತದೆಯೋ, ಅಲ್ಲಿ ಈ ವೈಪರಿತ್ಯಗಳ ಜೊತೆ ಥಂಡಿ, ಮಬ್ಬುಗತ್ತಲು ಅಥವಾ ಪ್ರಕರ ಬೆಳಕಿನ ಅಂಶ ಸೇರಿದಾಗ, ಅಂಥ ಪರಿಸರದಲ್ಲಿ ಒಂಟಿಯಾಗಿದ್ದಾಗ ಮನಸ್ಸು ದೆವ್ವವನ್ನು ಕಾಣುತ್ತದೆ ಎಂದು ನನ್ನನ್ನು ಸಮಾಧಾನಿಸಿ ತಾನೂ ಸೈನ್ಸ್ ಸ್ಟುಡೆಂಟ್ ಅನ್ನೊದನ್ನು ತೋರಿಸಿಬಿಟ್ಟಳು. ಎಲ್ಲವನ್ನು ಮರೆತು ಚೆನ್ನಾಗಿ ನಿದ್ದೆ ಮಾಡಿದೆ.

  • ಕಾವ್ಯಾ ಜಕ್ಕೊಳ್ಳಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss