Saturday, August 13, 2022

Latest Posts

ಅಮೆರಿಕಾದ ಅಧ್ಯಕ್ಷರಾಗಿ ಬೈಡೆನ್ ಘೋಷಣೆ: ಸುಗಮ ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಒಪ್ಪಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನವೆಂಬರ್ ಮೂರರಂದು ನಡೆದ ಚುನಾವಣೆಯಲ್ಲಿ ಅಮೆರಿಕಾದ ಮುಂದಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕ್ರಮವಾಗಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ ಎಂದು ಅಮೆರಿಕಾ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಔಪಚಾರಿಕವಾಗಿ ಘೋಷಿಸಿದೆ. ಈ ಮೂಲಕ ಜನವರಿ 20ನೇ ತಾರೀಖು ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ದಾರಿ ಸುಗಮವಾಗಿದೆ.
ಇನ್ನು ಚುನಾವಣೆ ನಡೆದ ಎರಡು ತಿಂಗಳಿನಿಂದಲೂ ತಮ್ಮ ಸೋಲು ಒಪ್ಪಿಕೊಳ್ಳದೆ, ಚುನಾವಣೆಯಲ್ಲಿ ಅಕ್ರಮ ಮತ್ತು ವಂಚನೆ ನಡೆದಿದೆ ಎಂದು ಆರೋಪಿಸುತ್ತಿದ್ದ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಟ್ರಂಪ್ ವಿರುದ್ಧದ ಫಲಿತಾಂಶವನ್ನು ರದ್ದಗೊಳಿಸಬೇಕು ಎಂದು ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅಲ್ಲಿನ ಸಂಸತ್ತು ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಠಿಣ ಸಂದೇಶ ರವಾನಿಸಿದೆ.
ಸಂಸತ್ತಿನ ಘೋಷಣೆ ಬಳಿಕ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್, ‘ಈ ನಿರ್ಧಾರವು ಅಧ್ಯಕ್ಷೀಯ ಇತಿಹಾಸದ ಮಹಾನ್ ಮೊದಲ ಅವಧಿಯನ್ನು ಬಿಂಬಿಸುತ್ತದೆ’ ಎಂದಿದ್ದಾರೆ. ‘ಚುನಾವಣೆಯ ಫಲಿತಾಂಶವನ್ನು ನಾನು ಸಂಪೂರ್ಣ ಒಪ್ಪದೇ ಹೋದರೂ ಮತ್ತು ವಾಸ್ತವಗಳು ನನ್ನ ವಿರುದ್ಧವಾಗಿದ್ದರೂ ಜನವರಿ 20ರಂದು ಸುವ್ಯವಸ್ಥಿತ ಅಧಿಕಾರ ಹಸ್ತಾಂತರ ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss