ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಅವರ ಕುಟುಂಬ ಸಹ ಆಗಮಿಸಲಿದೆ ಎಂದು ತಿಳಿದು ಬಂದಿದೆ.
ಟ್ರಂಪ್ ಜೊತೆ ಪತ್ನಿ ಮೆಲಾನಿಯಾ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿತ್ತು. ಈಗ ಟ್ರಂಪ್ ದಂಪತಿಯೊಂದಿಗೆ ಪುತ್ರಿ ಇವಾಂಕಾ ಟ್ರಂಪ್ ಹಾಗೂ ಅಳಿಯ ಜೆರಾಲ್ಡ್ ಕುಶ್ನರ್ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಅಹಮದಾಬಾದ್ ನಲ್ಲಿ ಭರ್ಜರಿ ತಯಾರಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ದಂಪತಿಗೆ ಶುಭಾಶಯ ಸಾರುವ ಭಿತ್ತಿ ಫಲಕಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿವೆ. ಟ್ರಂಪ್ ಆಗಮಿಸುವ ರಸ್ತೆಯುದ್ದಕ್ಕೂ ಅಲಂಕಾರ ಮಾಡಲಾಗುತ್ತಿದೆ.
22 ಕಿ.ಮೀ ರೋಡ್ ಶೋ ಕಡಿತ: ಟ್ರಂಪ್ ಮತ್ತು ಮೋದಿಯ 22 ಕಿ.ಮೀ. ದೂರದವರೆಗಿನ ರೋಡ್ ಶೋವನ್ನು 9 ಕಿ.ಮೀ. ಗೆ ಕಡಿತಗೊಳಿಸಲಾಗಿದೆ. ಸೋಮವಾರ ಗುಜರಾತ್ ಗೆ ಆಗಮಿಸಲಿರುವ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡು ಉಭಯ ನಾಯಕರ ರೋಡ್ ಶೋ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆರಂಭವಾಗಿ ಮೊಟೆರಾದಿಂದ ಕೋಟೆಶ್ವರದ ಮಾರ್ಗವಾಗಿ ಗಾಂಧಿನಗರ ತಲುಪಲಿತ್ತು. ಇದೀಗ ಗಾಂಧಿ ಆಶ್ರಮ ಭೇಟಿಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ರದ್ದುಪಡಿಸಿರುವುದಾಗಿ ತಿಳಿದು ಬಂದಿದೆ.