ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕ ಸಂಸತ್ತಿನ ಮೇಲೆ ಟ್ರಂಪ್ ಬೆಂಬಲಿಗರು ನಡೆಸಿರು ದಾಳಿಯನ್ನು ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬಿಡನ್ ತೀವ್ರವಾಗಿ ಖಂಡಿಸಿದ್ದು, ಇದು ಅಮೆರಿಕ ಇತಿಹಾಸದಲ್ಲೇ ‘ಅತ್ಯಂತ ಕರಾಳ ಕ್ಷಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿ ಇದಾಗಿದೆ. ಅಮೆರಿಕ ಸಂಸತ್ ಮೇಲೆಯೇ ದಾಳಿಯಾಗಿದೆ. ಜನಪ್ರತಿನಿಧಿಗಳ, ಪೊಲೀಸರು, ರಿಪಬ್ಲಿಕ್ ಹೃದಯ ಭಾಗದಲ್ಲಿ ಕೆಲಸ ಮಾಡುತ್ತಿರುವ ಪಬ್ಲಿಕ್ ಸರ್ವಂಟ್ಗಳ ಮೇಲೆಯೂ ಹಲ್ಲೆ ನಡೆದಿದೆ. ಜನರ ಸೇವೆ ಮಾಡುವ ಅಮೆರಿಕನ್ನರ ಅತ್ಯಂತ ಪವಿತ್ರ ಸಂಸ್ಥೆಯ ಮೇಲೆ ಹಲ್ಲೆ ನಡೆದಿದೆ. ಅಮೆರಿಕ ಇತಿಹಾಸದಲ್ಲೇ ‘ಅತ್ಯಂತ ಕರಾಳ ಕ್ಷಣ ಇದು ಎಂದು ಬಿಡೆನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವನ್ನು ಟ್ರಂಪ್ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಎಲೆಕ್ಟೋರಲ್ ಕಾಲೇಜ್ ಮತ ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಪ್ರತಿಭಟನಾಕಾರರು ಧಾಂದಲೆ ನಡೆಸಿದರು.