ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದ ಆಡಳಿತ ಚುಕ್ಕಾಣಿ ಹಿಡಿದವರು ಸಂಬಂಧಗಳಲ್ಲಿ ಭಾರತಕ್ಕೆ ಮತ್ತಷ್ಟು ಹತ್ತಿರವಾಗಿದೆ!
ನಿಯೋಜಿತ ಅಧ್ಯಕ್ಷರಾಗಿರುವ ಬಿಡೆನ್ ಬಾಂಧವ್ಯ ಭಾರತದಲ್ಲಿದೆ ಎಂಬುದು ಇತ್ತೀಚೆಗಷ್ಟೇ ಗೊತ್ತಾಗಿತ್ತು. ಇನ್ನು ಪ್ರಥಮ ಮಹಿಳೆ ಎನಿಸಿಕೊಳ್ಳುವ ಜಿಲ್ ಬೈಡನ್ ಅವರ ನೀತಿ ನಿರ್ದೇಶಕರಾಗಿ ನೇಮಕವಾಗಿರುವ ಮಾಲಾ ಅಡಿಗ ಅವರು ಕೂಡಾ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರಾಗಿರುವುದು ಭಾರತಕ್ಕಷ್ಟೇ ಅಲ್ಲ, ಉಡುಪಿ ಜಿಲ್ಲೆಗೂ ಹೆಮ್ಮೆ ತಂದಿದೆ.
ಕುಂದಾಪುರ ತಾಲೂಕಿನ ಪ್ರತಿಷ್ಠಿತ ಕಕ್ಕುಂಜೆ ಅಡಿಗ ಕುಟುಂಬದವರಾದ 47 ವರ್ಷ ಪ್ರಾಯದ ಮಾಲಾ ಅಡಿಗ, ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಅಮೆರಿಕದಲ್ಲೇ. ಸದ್ಯ ವಕೀಲ ವೃತ್ತಿಯಲ್ಲಿರುವ ಅವರು ಜಿಲ್ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಬೈಡನ್- ಕಮಲಾ ಹ್ಯಾರಿಸ್ ಅವರ ಪ್ರಚಾರ ಅಭಿಯಾನದಲ್ಲಿ ಹಿರಿಯ ನೀತಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಕರ್ಣಾಟಕ ಬ್ಯಾಂಕಿನ ಸ್ಥಾಪಕ ಕೆ. ಸೂರ್ಯನಾರಾಯಣ ಅಡಿಗ ಈ ಕುಟುಂಬದ ಹಿರಿಯರಾಗಿದ್ದರೆ, ಅಂತಾರಾಷ್ಟ್ರೀಯ ಖ್ಯಾತಿಯ ಆಂಗ್ಲ ಲೇಖಕ, ಕಾದಂಬರಿಕಾರ 2008ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಗೆ ಭಾಜನರಾದ ಅರವಿಂದ ಅಡಿಗ, ಈ ಸೂರ್ಯನಾರಾಯಣ ಅಡಿಗರ ಮೊಮ್ಮಗನಾಗಿದ್ದಾರೆ. ಇದೀಗ ಇದೇ ಕುಟುಂಬದ ಸದಸ್ಯೆ ವಿಶ್ವದ ಹಿರಿಯಣ್ಣನ ಮನೆಯಲ್ಲಿ ಜವಾಬ್ದಾರಿಯುತ ಸ್ಥಾನ ಪಡೆದುಕೊಂಡಿದ್ದಾರೆ.