ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕಾದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಜೋ ಬಿಡನ್ ಗೆ ವಹಿಸುವುದಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಹಂತದಲ್ಲಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕದ ಸಂಸತ್ (ಕ್ಯಾಪಿಟಲ್) ಮೇಲೆ ನುಗ್ಗಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಘಟನೆಯಲ್ಲಿ ಅಮೆರಿಕಾದ ಕಾಂಗ್ರೆಸ್ನ ಅಧಿಕಾರಿಗಳು ಸೇರಿದಂತೆ ಅನೇಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಅಮೆರಿಕ ಕ್ಯಾಪಿಟಲ್ಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಯಲ್ಲಿ ಭಾಗಿಯಾದರು.
ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪುವುದನ್ನು ಮನಗಂಡ ಟ್ರಂಪ್, ತಮ್ಮ ಬೆಂಬಲಿಗರಲ್ಲಿ ಮನೆಗೆ ಹಿಂತಿರುವಂತೆ ಮನವಿ ಮಾಡಿದರು.